ADVERTISEMENT

ರಬ್ಬಾನಿ ಹತ್ಯೆ: ಹಖಾನಿ ನಿರಾಕರಣೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2011, 19:30 IST
Last Updated 3 ಅಕ್ಟೋಬರ್ 2011, 19:30 IST

ಲಂಡನ್, (ಪಿಟಿಐ): `ಆಫ್ಘಾನಿಸ್ತಾನ ಶಾಂತಿ ಮಂಡಳಿ ಮುಖ್ಯಸ್ಥ  ಬಹ್ರುದ್ದೀನ್ ರಬ್ಬಾನಿ ಅವರನ್ನು ನಮ್ಮ ಸಂಘಟನೆ ಹತ್ಯೆ ಮಾಡಿಲ್ಲ~ ಎಂದು ಪಾಕಿಸ್ತಾನದ ಐಎಸ್‌ಐನ ನಿಜವಾದ ಅಸ್ತ್ರವೆಂದೇ ಕರೆಯಲಾಗುತ್ತಿರುವ ಹಖಾನಿ ಸಂಘಟನೆಯ ಕಾರ್ಯಾಚರಣೆ ಮುಖ್ಯಸ್ಥ ಸಿರಾಜುದ್ದಿನ್ ಹಖಾನಿ ತಿಳಿಸಿದ್ದಾನೆ.

ಐಎಸ್‌ಐ ಜತೆ ನಮ್ಮ ಸಂಘಟನೆಗೆ ಸಂಪರ್ಕವಿದೆ ಎಂಬ ವರದಿಯನ್ನೂ ಆತ ನಿರಾಕರಿಸಿದ್ದಾನೆ. ಇದೆ ಮೊದಲ ಬಾರಿಗೆ ಬಹಿರಂಗವಾಗಿ  ಹಖಾನಿ ಹೇಳಿಕೆ ನೀಡಿದ್ದು, ಬಿಬಿಸಿ ಜತೆಗಿನ ಸಂದರ್ಶನದಲ್ಲಿ ರಬ್ಬಾನಿ ಹತ್ಯೆಯನ್ನು ಅಲ್ಲಗಳೆದ್ದ್ದಿದಾನೆ.

ಆಫ್ಘಾನಿಸ್ತಾನದಲ್ಲಿಯ ಅಮೆರಿಕ ರಾಯಭಾರ ಕಚೇರಿಯ ಮೇಲೆ ತಮ್ಮ ಸಂಘಟನೆ ದಾಳಿ ಮಾಡಿದ್ದಕ್ಕೂ ಪಾಕಿಸ್ತಾನದ ಐಎಸ್‌ಐಗೂ ಯಾವುದೆ ಸಂಬಂಧವಿಲ್ಲ ಮತ್ತು ಅಮೆರಿಕದ ಆಪಾದನೆಯಲ್ಲಿ ಹುರುಳಿಲ್ಲ ಎಂದು ಹಖಾನಿ ಸ್ಪಷ್ಟಪಡಿಸಿದ್ದಾನೆ.

ಹಖಾನಿ ಸಂಘಟನೆಯನ್ನು ಬಳಸಿಕೊಂಡು ಐಎಸ್‌ಐ ಆಫ್ಘಾನಿಸ್ತಾನದಲ್ಲಿ ತೆರೆಮರೆಯ ಯುದ್ಧ ನಡೆಸುತ್ತಿದೆ. ಹಖಾನಿ ಸಂಘಟನೆಯು ಐಎಸ್‌ಐನ ಅಸ್ತ್ರ ಎಂದು ಅಮೆರಿಕದ ಸೇನಾ ಪಡೆಗಳ ಮಾಜಿ ಮುಖ್ಯಸ್ಥ ಅಡ್ಮಿರಲ್ ಮೈಕ್ ಮ್ಲ್ಲುಲನ್ ಅನೇಕ ಬಾರಿ ಆಪಾದಿಸಿದ್ದಾರೆ.

ತಾಲಿಬಾನ್ ಸೇನಾ ಮಂಡಲಿಯ ಆದೇಶದಂತೆ ಆಫ್ಘಾನಿಸ್ತಾನದಲ್ಲಿಯ ಅಮೆರಿಕದ ರಾಯಭಾರ ಕಚೇರಿ, ನ್ಯಾಟೊ ಪ್ರಧಾನ ಕಚೇರಿ ಮತ್ತು ಇತರ ಕಡೆಗಳಲ್ಲಿ ನಮ್ಮ ಸಂಘಟನೆಯು ಬಾಂಬ್ ದಾಳಿ ನಡೆಸಿದೆ ಎಂದು ಹಖಾನಿ ತಿಳಿಸಿದ್ದಾನೆ.

ತಾಲಿಬಾನ್ ಮುಖ್ಯಸ್ಥ ಮುಲ್ಲಾ ಒಮರ್ ಅವರೇ ನಮ್ಮ ಮುಖಂಡ ಮತ್ತು ನಾವು ಅವರಿಗೆ ನಿಷ್ಠರಾಗಿರುತ್ತೇವೆ ಎಂದು ಆತ ಈ ಸಂದರ್ಭದಲ್ಲಿ ಘೋಷಿಸಿದ್ದಾನೆ. ಪಾಶ್ಚಿಮಾತ್ಯ ರಾಷ್ಟ್ರಗಳ ಆಟ ಅಂತ್ಯ ಸಮೀಪಿಸುತ್ತಿದೆ ಎಂದೂ ಹಖಾನಿ ತಿಳಿಸಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.