ಮಾಸ್ಕೋ (ಪಿಟಿಐ): ಪ್ರಯಾಣಿಕರ ವಿಮಾನವೊಂದು ಮಂಗಳವಾರ ಹೆದ್ದಾರಿಯಲ್ಲಿ ಅಪಘಾತಕ್ಕೀಡಾದ ಪರಿಣಾಮವಾಗಿ 44 ಮಂದಿ ಸಾವನ್ನಪ್ಪಿ ಇತರ 8 ಮಂದಿ ಗಾಯಗೊಂಡ ಘಟನೆ ರಷ್ಯಾದ ಉತ್ತರಭಾಗದ ಕರೇಲಿಯಾ ಪ್ರಾಂತ್ಯದಲ್ಲಿ ಸಂಭವಿಸಿದೆ.
ರಷ್ಯಾ ಏರ್ ಲೈನ್ಸ್ ಗೆ ಸೇರಿದ ವಿಮಾನವು ಮಾಸ್ಕೋದಿಂದ ಕರೇಲಿಯಾಕ್ಕೆ ಬರುತ್ತಿತ್ತು. ಪೆಟ್ರೊಡವೊಸ್ಕ್ ವಿಮಾನ ನಿಲ್ದಾಣಕ್ಕೆ 2 ಕಿ.ಮೀ. ಮೊದಲೇ ಮೋಟಾರು ವಾಹನಗಳು ಸಂಚರಿಸುವ ಹೆದ್ದಾರಿಯಲ್ಲಿ ನೆಲಕ್ಕಪ್ಪಳಿಸಿದ ವಿಮಾನ ವೇಳೆ ಭಾರಿ ಪ್ರಮಾಣದ ಸ್ಫೋಟದೊಂದಿಗೆ ಬೆಂಕಿ ಹೊತ್ತಿಕೊಂಡು ಉರಿಯಿತು. ಈ ದುರಂತದಲ್ಲಿ 44 ಮಂದಿ ಸಾವನ್ನಪ್ಪಿ, ಇತರೆ 8 ಮಂದಿ ಗಾಯಗೊಂಡರು.
ವಿಮಾನ ಕೆಳಗಿಳಿಯಲು ಬರುತ್ತಿದ್ದ ಈ ವೇಳೆಯಲ್ಲಿ ಪ್ರತಿಕೂಲ ವಾತಾವರಣವಿದ್ದು, ದಟ್ಟ ಮಂಜು ಹಾಗೂ ಮಳೆಯೂ ಬೀಳುತ್ತಿತ್ತೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.