ಮಾಸ್ಕೊ (ಪಿಟಿಐ): ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಪ್ರಧಾನಿ ವ್ಲಾಡಿಮಿರ್ ಪುಟಿನ್ ವಿರುದ್ಧ ತೀಕ್ಷ್ಣ ಆಪಾದನೆ ಮಾಡಿರುವ ಪ್ರತಿಪಕ್ಷಗಳು, ರಾಷ್ಟ್ರದ ವಿವಿಧೆಡೆ ಅನಿರ್ದಿಷ್ಟಾವಧಿ ಪ್ರತಿಭಟನಾ ರ‌್ಯಾಲಿ ನಡೆಸುತ್ತಿವೆ. ಇದೇ ವೇಳೆಗೆ ಸರ್ಕಾರ ಪ್ರತಿಭಟನೆಕಾರರನ್ನು ನಿಯಂತ್ರಿಸಲು ಕ್ರಮ ಕೈಗೊಂಡಿದೆ.
ರಾಜಧಾನಿ ಮಾಸ್ಕೊದ ಪುಷ್ಕಿನ್ ಚೌಕದಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಜನರು ಜಮಾಯಿಸಿ ಬಹೃತ್ ರ‌್ಯಾಲಿ ನಡೆಸಿದ್ದಾರೆ. ಪ್ರತಿಭಟನಾಕಾರರು ಚುನಾವಣಾ ಫಲಿತಾಂಶವನ್ನು ಶಂಕಿಸಿದ್ದು, ಅದರ ಖಚಿತತೆಯನ್ನು ಪ್ರಶ್ನಿಸಿದ್ದಾರೆ.
ಚುನಾವಣಾ ಅಕ್ರಮ: ಒಪ್ಪಿಕೊಂಡ ಪುಟಿನ್ |
ಭಾನುವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮಗಳು ನಡೆದಿರಬಹುದು ಎಂದು ಒಪ್ಪಿಕೊಂಡಿರುವ ಪುಟಿನ್, ಈ ಕುರಿತು ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ. |
`ವಿವಿಧೆಡೆಯಿಂದ ಸಾವಿರ ಸಾವಿರ ಸಂಖ್ಯೆಯಲ್ಲಿ ಜನರು ಇಲ್ಲಿಗೆ ಬರುತ್ತಿದ್ದು, ಪುಟಿನ್ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ನಮ್ಮ ಬೇಡಿಕೆ ಈಡೇರುವವರೆಗೂ ಈ ರ‌್ಯಾಲಿ ಕೈಬಿಡುವುದಿಲ್ಲ~ ಎಂದು ಪ್ರತಿಭಟನೆಯ ನೇತೃತ್ವ ವಹಿಸಿರುವವರಲ್ಲಿ ಒಬ್ಬರಾದ ಅಲೆಕ್ಸಿ ನವಲ್ನಿ ಬಂಧನದಿಂದ ಬಿಡುಗಡೆಯಾದ ತರುವಾಯ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪುಟಿನ್ ಅವರ ಗೆಲುವನ್ನು ವಿರೋಧಿಸಿ ರ‌್ಯಾಲಿ ನಡೆಸುತ್ತಿದ್ದ ಪ್ರತಿಪಕ್ಷಗಳ ಸುಮಾರು 250 ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆ ಮಾಡಿದ್ದಾರೆ.
ನವಲ್ನಿ ಮತ್ತು ಅವರ ಸಹಪ್ರತಿಭಟನಾಕಾರ ಸೆರ್ಗೆಯ್ ಉದಾಲ್‌ತ್ಸೊವ್ ಅವರಿಗೆ 2,000 ರುಬಲ್‌ಗಳಷ್ಟು (68 ಡಾಲರ್) ದಂಡ ಸಹ ವಿಧಿಸಲಾಗಿದೆ ಎಂದು ಬಿಬಿಸಿ ವರದಿ ಮಾಡಿದೆ. ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ 300 ಪ್ರತಿಭಟನಾಕಾರರನ್ನು ಬಂಧಿಸಲಾಗಿದ್ದು, ಇವರಲ್ಲಿ ಎಷ್ಟು ಮಂದಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿದು ಬಂದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.