ADVERTISEMENT

ರೋಹಿಂಗ್ಯಾ: ಮರಳಲು ಒಪ್ಪಂದ

ಏಜೆನ್ಸೀಸ್
Published 6 ಜೂನ್ 2018, 19:30 IST
Last Updated 6 ಜೂನ್ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಯಾಂಗೂನ್: ಬಾಂಗ್ಲಾ ದೇಶಕ್ಕೆ ವಲಸೆ ಹೋಗಿರುವ ರೋಹಿಂಗ್ಯಾ ಮುಸ್ಲಿಮರು ಮ್ಯಾನ್ಮಾರ್‌ಗೆ ಮರಳಲು ಸಾಧ್ಯವಾಗುವಂತಹ ಒಪ್ಪಂದವೊಂದಕ್ಕೆ ಮ್ಯಾನ್ಮಾರ್ ಸರ್ಕಾರ ಹಾಗೂ ವಿಶ್ವಸಂಸ್ಥೆ ಬುಧವಾರ ಸಹಿ ಹಾಕಿವೆ.

ರೋಹಿಂಗ್ಯಾ ನಿರಾಶ್ರಿತರ ಬಿಕ್ಕಟ್ಟು ನಿವಾರಿಸುವಲ್ಲಿ ಈ ಒಪ್ಪಂದ ಮೊದಲ ಪ್ರಮುಖ ಹೆಜ್ಜೆಯಾಗಿದೆ ಎಂದು, ವಿಶ್ವಸಂಸ್ಥೆ ಪರವಾಗಿ ಮ್ಯಾನ್ಮಾರ್‌ನಲ್ಲಿರುವ ಮಾನವೀಯ ಸಮನ್ವಯಕಾರ ನುಟ್‌ ಆಸ್ಟ್‌ಬಿ ಹೇಳಿದ್ದಾರೆ.

ರೋಹಿಂಗ್ಯಾ ನಿರಾಶ್ರಿತರು‘ಸ್ವಯಂಪ್ರೇರಿತರಾಗಿ, ಸುರಕ್ಷಿತವಾಗಿ ಹಾಗೂ ಗೌರವಯುತವಾಗಿ’ ಮರಳುವ ಪರಿಸ್ಥಿತಿ ನಿರ್ಮಿಸಲು ‘ಸಹಕಾರಯುತ ಕಾರ್ಯಸೂಚಿ’ ರೂಪಿಸುವ ಸಲುವಾಗಿ ಈ ಒಪ್ಪಂದ ಮಾಡಿಕೊಳ್ಳಲಾಗಿದೆ.

ADVERTISEMENT

‘ಇದರಿಂದಾಗಿ, ವಿಶ್ವಸಂಸ್ಥೆಯ ನಿರಾಶ್ರಿತ ಹಾಗೂ ಅಭಿವೃದ್ಧಿ ಸಂಸ್ಥೆಯು ರಾಖೈನ್‌ಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಕುರಿತು ನಿರಾಶ್ರಿತರಿಗೆ ಮಾಹಿತಿ ನೀಡಬಹುದಾಗಿದೆ. ತಮ್ಮ ಊರುಗಳಲ್ಲಿನ ಪರಿಸ್ಥಿತಿ ತಿಳಿದ ನಂತರ ವಾಪಸಾಗುವ ಕುರಿತು ಅವರು ಸೂಕ್ತ ನಿರ್ಧಾರ ಕೈಗೊಳ್ಳಬಹುದಾಗಿದೆ’ ಎಂದು ವಿಶ್ವಸಂಸ್ಥೆ ತಿಳಿಸಿದೆ.

ಮ್ಯಾನ್ಮಾರ್ ಸೇನಾಪಡೆ ಕಾರ್ಯಾಚರಣೆಯಿಂದ ಅಪಾಯ ಎದುರಿಸುತ್ತಿದ್ದ ಅಂದಾಜು 7 ಲಕ್ಷಕ್ಕೂ ಹೆಚ್ಚು ರೋಹಿಂಗ್ಯಾ ಮುಸ್ಲಿಮರು ಬಾಂಗ್ಲಾ ದೇಶದಲ್ಲಿ ಆಶ್ರಯ ಪಡೆದಿದ್ದಾರೆ.

ರೋಹಿಂಗ್ಯಾ ನಿರಾಶ್ರಿತರು ಮರಳುವ ಪ್ರಕ್ರಿಯೆಗೆ ಮ್ಯಾನ್ಮಾರ್ ಹಾಗೂ ಬಾಂಗ್ಲಾ ದೇಶ ನವೆಂಬರ್‌ನಲ್ಲಿಯೇ ಒಪ್ಪಿಕೊಂಡಿದ್ದವು. ಆದರೆ ಅಂತರ ರಾಷ್ಟ್ರೀಯ ಮಟ್ಟದ ನಿಗಾ ಇಲ್ಲದೆ ಮ್ಯಾನ್ಮಾರ್‌ಗೆ ಮರಳುವುದು ಅಪಾಯಕಾರಿ ಆಗಿರಬಹುದು ಎಂದು ನಿರಾಶ್ರಿತರು ಭೀತಿ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.