ADVERTISEMENT

ರೋಹಿಂಗ್ಯಾ ಮುಸ್ಲಿಮರ ಮೇಲೆ ದಾಳಿ: ಅಮೆರಿಕ ಖಂಡನೆ

ಪಿಟಿಐ
Published 6 ಡಿಸೆಂಬರ್ 2017, 19:30 IST
Last Updated 6 ಡಿಸೆಂಬರ್ 2017, 19:30 IST
ರೋಹಿಂಗ್ಯಾ ಮುಸ್ಲಿಮರ ಮೇಲೆ ದಾಳಿ: ಅಮೆರಿಕ ಖಂಡನೆ
ರೋಹಿಂಗ್ಯಾ ಮುಸ್ಲಿಮರ ಮೇಲೆ ದಾಳಿ: ಅಮೆರಿಕ ಖಂಡನೆ   

ವಾಷಿಂಗ್ಟನ್ : ರೋಹಿಂಗ್ಯಾ ಮುಸ್ಲಿಮರ ‘ಜನಾಂಗೀಯ ನಿರ್ಮೂಲನೆ’ಯನ್ನು ಅಮೆರಿಕದ ಜನಪ್ರತಿನಿಧಿ ಸಭೆ ಖಂಡಿಸಿದ್ದು, ಮ್ಯಾನ್ಮಾರ್‌ ಸರ್ಕಾರ ರಖೈನ್‌ನಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಸುತ್ತಿರುವ ದಾಳಿಯನ್ನು ಕಟುವಾಗಿ ಟೀಕಿಸಿದೆ.

ಅಶಾಂತಿ ಇರುವ ರಖೈನ್‌ನಲ್ಲಿ ಶಾಂತಿ ನೆಲೆಸುವಂತೆ ಮಾಡಲು ತಕ್ಷಣ ಕ್ರಮಕೈಗೊಳ್ಳಬೇಕು. ರೋಹಿಂಗ್ಯಾ ಸಮುದಾಯದವರಿಗೆ ಮೂಲ ಸೌಲಭ್ಯಗಳು ಲಭ್ಯವಾಗುವಂತೆ ಮಾಡಬೇಕು ಎಂದು ಒತ್ತಾಯಿಸುವ ನಿರ್ಣಯವನ್ನು ಸಭೆಯಲ್ಲಿ ಅಂಗೀಕರಿಸಲಾಗಿದೆ.

‘ಈ ಹತ್ಯಾಕಾಂಡ ಕೊನೆಯಾಗಬೇಕು. ಮ್ಯಾನ್ಮಾರ್‌ ಗಡಿಯೊಳಗೆ ಯಾವುದೇ ಜನಾಂಗದ ಮತ್ತು ನಂಬಿಕೆಯ ಜನರು ವಾಸವಿದ್ದರೂ ಎಲ್ಲರ ವೈಯಕ್ತಿಕ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ಮ್ಯಾನ್ಮಾರ್ ನಾಯಕತ್ವ ಗೌರವಿಸಬೇಕು. ಇದರ ಆಧಾರದ ಮೇಲೆ ಪ್ರಜಾಪ್ರಭುತ್ವ ಪುನರ್‌ಸ್ಥಾಪನೆಗೆ ಮ್ಯಾನ್ಮಾರ್ ನಾಯಕತ್ವ ಬದ್ಧವಾಗಿದೆಯೇ ಇಲ್ಲವೇ ಎನ್ನುವುದನ್ನು ನಿರ್ಧರಿಸಲಾಗುತ್ತದೆ’ ಎಂದು ಸ್ಟೆನಿ ಎಚ್.ಹೋಯರ್ ಹೇಳಿದ್ದಾರೆ.

ADVERTISEMENT

ಸಂಸದ ಜೋ ಕ್ರೌಲಿ ಹಾಗೂ ಎಲಿಯಟ್ ಎಂಗಲ್ ಅವರು ಮಂಡಿಸಿದ ನಿರ್ಣಯದಲ್ಲಿ, ಸೇನೆಯ ‘ಭಯಾನಕ ಕ್ರಮ’ಗಳನ್ನು ಖಂಡಿಸಿದ್ದು ತಕ್ಷಣವೇ ಗಲಭೆ ನಿಲ್ಲಿಸುವಂತೆ ಕರೆ ನೀಡಲಾಗಿದೆ.

‘ಆಂಗ್ ಸಾನ್ ಸೂಕಿ ಅವರು ನೈತಿಕ ನಾಯಕತ್ವ ತೋರಿಸಬೇಕಿದ್ದು, ಹಿಂದೆಂದಿಗಿಂತಲೂ ಪ್ರಸ್ತುತ ಇದರ ಅವಶ್ಯಕತೆ ಹೆಚ್ಚಿದೆ’ ಎಂದು ಎಂಗಲ್ ಹೇಳಿದ್ದಾರೆ.

ಮ್ಯಾನ್ಮಾರ್‌ನಲ್ಲಿ ಬಿಕ್ಕಟ್ಟು ಸೃಷ್ಟಿಯಾದ ನಂತರ ಆರು ಲಕ್ಷಕ್ಕೂ ಹೆಚ್ಚು ರೋಹಿಂಗ್ಯಾ ಅಲ್ಪಸಂಖ್ಯಾತ ಮುಸ್ಲಿಮರು ಬಾಂಗ್ಲಾದೇಶಕ್ಕೆ ವಲಸೆ ಹೋಗಿದ್ದಾರೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.