ADVERTISEMENT

ಲಾಡೆನ್ ಮುಸ್ಲಿಮರ ಹಂತಕ: ಒಬಾಮ

​ಪ್ರಜಾವಾಣಿ ವಾರ್ತೆ
Published 2 ಮೇ 2011, 19:30 IST
Last Updated 2 ಮೇ 2011, 19:30 IST

ವಾಷಿಂಗ್ಟನ್(ಪಿಟಿಐ): ಅಲ್‌ಖೈದಾ ಮುಖ್ಯಸ್ಥ ಒಸಾಮ ಬಿನ್ ಲಾಡೆನ್‌ನ ಹತ್ಯೆಯನ್ನು ಘೋಷಿಸಿದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ,   ಅವನೊಬ್ಬ ‘ಮುಸ್ಲಿಂ ನಾಯಕ’ನಲ್ಲ, ಬದಲಾಗಿ ‘ಮುಸ್ಲಿಂರ ಹಂತಕನಾಗಿದ್ದ’ ಎಂದು ಸೋಮವಾರ ತಿಳಿಸಿದ್ದಾರೆ.ಇದೇ ವೇಳೆ ಅಮೆರಿಕ ಯಾವತ್ತೂ ಇಸ್ಲಾಂ ಜೊತೆ ಯುದ್ಧ ಬಯಸುವುದಿಲ್ಲ ಎಂಬುದನ್ನು ಅವರು ತಮ್ಮ ಭಾಷಣದಲ್ಲಿ ಸ್ಪಷ್ಟಪಡಿಸಿದ್ದಾರೆ.

‘9/11 ದಾಳಿಯ ನಂತರ ಬುಷ್ ಆರಂಭಿಸಿದ ಕಾರ್ಯವನ್ನೇ ನಾನೂ ಈಗ ಮುಂದುವರಿಸಿದ್ದೇನಷ್ಟೆ’ ಎಂದು ತಿಳಿಸಿದ್ದಾರೆ.ಅಮೆರಿಕದ ಮುಸ್ಲಿಮರನ್ನು ಒಳಗೊಂಡಂತೆ ಅಲ್‌ಖೈದಾ ಅನೇಕ ದೇಶಗಳ ಅಸಂಖ್ಯಾತ ಮುಸ್ಲಿಮರ ಹತ್ಯೆ ಮಾಡಿದೆ. ಆದ್ದರಿಂದ ಶಾಂತಿ ಹಾಗೂ ಮಾನವೀಯ ಮೌಲ್ಯದ ಮೇಲೆ ನಂಬಿಕೆ ಇರುವ ಎಲ್ಲರೂ ಒಸಾಮಾನ ಅಂತ್ಯವನ್ನು ಸ್ವಾಗತಿಸಬೇಕು’ ಎಂದು ಅವರು ಹೇಳಿದ್ದಾರೆ.
 
‘ಸಾವಿರಾರು ಮಹಿಳೆಯರು, ಮಕ್ಕಳು, ಸಾರ್ವಜನಿಕರ ಸಾವಿಗೆ ಕಾರಣನಾದ ಜಗತ್ತಿನ ಕ್ರೂರ ವ್ಯಕ್ತಿ ಒಸಾಮ ಬಿನ್ ಲಾಡೆನ್‌ನನ್ನು ನಮ್ಮ ಪಡೆಗಳು ಕೊಂದು ಹಾಕಿವೆ’ಹೀಗೆಂದವರು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ. ಪಾಕಿಸ್ತಾನದಲ್ಲಿ ಅಮೆರಿಕ ಸಿಐಎ ಮತ್ತು ವಿಶೇಷ ಪಡೆಗಳು ಒಸಾಮ ಹತ್ಯೆ ಮಾಡಿದ ಕೆಲವೇ ನಿಮಿಷಗಳಲ್ಲಿ ಶ್ವೇತಭವನದಲ್ಲಿ ಹೇಳಿಕೆ ನೀಡಿದ ಒಬಾಮ, ‘ಹತ್ತು ವರ್ಷಗಳ ಹಿಂದೆ, ಅಮೆರಿಕದಲ್ಲಿ ಕರಾಳ ದಿನಕ್ಕೆ ಕಾರಣವಾಗಿದ್ದ ಲಾಡೆನ್‌ಗೆ ಗತಿ ಕಾಣಿಸುವಲ್ಲಿ ನಮ್ಮ ಪಡೆಗಳು ಯಶಸ್ವಿಯಾಗಿವೆ’ ಎಂದು ಹರ್ಷದಿಂದ ನುಡಿದರು.

‘2001ರ ಸೆಪ್ಟೆಂಬರ್ 11 ನಮ್ಮ ದುಃಖದ ಗಳಿಗೆಯಲ್ಲಿ ಇಡೀ ಅಮೆರಿಕ ಜನತೆ ಒಂದಾಯಿತು. ಅಲ್ ಖೈದಾ ಮತ್ತು ಲಾಡೆನ್ ಸೇರಿದಂತೆ ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಅಂತರರಾಷ್ಟ್ರೀಯ ಸಮುದಾಯದ ಜತೆ ಸೇರಿಕೊಂಡು ನಡೆಸಿದ ಸುದೀರ್ಘ ಹೋರಾಟಕ್ಕೆ ಯಶ ದೊರೆತಿದೆ’ ಎಂದು ಒಬಾಮ ಹೇಳಿದರು.
‘ಅಲ್ ಖೈದಾ ಜಾಲವನ್ನು ತಡೆಯುವುದು, ಅದನ್ನು ನಿರ್ನಾಮ ಮಾಡುವುದು, ನಮ್ಮ ಯೋಜನೆಯಾದರೂ ಸಹ, ನಮ್ಮ ಪಡೆಗಳು, ಅಂತರರಾಷ್ಟ್ರೀಯ ಪಡೆಗಳ ಸಹಕಾರದೊಂದಿಗೆ ಭಯೋತ್ಪಾದಕರ ವಿರುದ್ಧ ಹೋರಾಡುತ್ತಲೇ ಬಂದಿವೆ.

ಆಫ್ಘನ್ ಗಡಿಯಿಂದ ಪಾಕ್ ಗಡಿಯೊಳಗೆ ನುಸುಳಿದ ಲಾಡೆನ್ ಸೆರೆಯಾಗುವುದರಿಂದ  ಸ್ವಲ್ಪದರಲ್ಲಿ ತಪ್ಪಿಸಿಕೊಂಡಿದ್ದ. ಆದರೆ ನಮ್ಮ ಗುಪ್ತಚರ ಇಲಾಖೆ ನೀಡಿದ ಖಚಿತ ಮಾಹಿತಿಗಳನ್ನು ಆಧರಿಸಿ, ಆತನ ಅಡಗುದಾಣವನ್ನು ಪತ್ತೆ ಮಾಡಿ ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ’ ಎಂದು ತಮ್ಮ ಹೇಳಿಕೆಯಲ್ಲಿ ಅಧ್ಯಕ್ಷರು ತಿಳಿಸಿದರು.

‘ಅಸಾಧಾರಣ ಸಾಮರ್ಥ್ಯ ಮತ್ತು ಸ್ಥೈರ್ಯವುಳ್ಳ ಅಮೆರಿಕದ ಪಡೆಗಳು ಸ್ಪಷ್ಟ ಮತ್ತು ನಿಖರ ದಾಳಿ ಮೂಲಕ ಲಾಡೆನ್‌ನನ್ನು ಕೊಂದು ಹಾಕಿವೆ. ದಾಳಿಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು. ಆತನ ದೇಹವನ್ನು ನಮ್ಮ ಪಡೆಗಳು ವಶಕ್ಕೆ ಪಡೆದುಕೊಂಡಿವೆ’ ಎಂದೂ ಹೇಳಿದರು.

‘ಕಳೆದ ಎರಡು ದಶಕಗಳಿಂದ ನಮ್ಮ ರಾಷ್ಟ್ರ, ನಮ್ಮ ಗೆಳೆಯರು ಹಾಗೂ ಮಿತ್ರ ರಾಷ್ಟ್ರಗಳ ವಿರುದ್ಧ ಲಾಡೆನ್ ಅಲ್‌ಖೈದಾ ಮೂಲಕ ತೊಂದರೆ ನೀಡುತ್ತಲೇ ಬಂದಿದ್ದ. ಹಾಗಾಗಿ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಲಾಡೆನ್ ಹತ್ಯೆ ಮಹತ್ವ ಪಡೆದುಕೊಂಡಿದೆ’ ಎಂದೂ ತಿಳಿಸಿದರು.

‘ಲಾಡೆನ್ ಹತ್ಯೆ ಭಯೋತ್ಪಾದಕರ ವಿರುದ್ಧದ ಸಮರಕ್ಕೆ ಕೊನೆಯಲ್ಲ. ಇಡೀ ಭಯೋತ್ಪಾದಕರನ್ನು ಬೇರು ಸಹಿತ ಕಿತ್ತು ಹಾಕುವುದು ನಮ್ಮ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಪಾಕಿಸ್ತಾನ ಸೇರಿದಂತೆ ಅಂತರರಾಷ್ಟ್ರೀಯ ಸಮುದಾಯದ ಜತೆ ಸೇರಿ ಕೆಲಸ ನಿರ್ವಹಿಸಲಾಗುವುದು’ ಎಂದು ಅವರು ಒಬಾಮ ಘೋಷಣೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.