ADVERTISEMENT

ಲಿಬಿಯಾ: 10 ದಿನದಲ್ಲಿ ತಾತ್ಕಾಲಿಕ ಸರ್ಕಾರ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2011, 19:30 IST
Last Updated 12 ಸೆಪ್ಟೆಂಬರ್ 2011, 19:30 IST

ಟ್ರಿಪೋಲಿ,(ಎಎಪ್‌ಪಿ): ಲಿಬಿಯಾ ದಲ್ಲಿ ಇನ್ನು 10 ದಿನಗಳಲ್ಲಿ ಹೊಸ ಹಂಗಾಮಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ರಾಷ್ಟ್ರೀಯ ತಾತ್ಕಾಲಿಕ ಮಂಡಳಿಯ ಪ್ರಧಾನಿಯಾಗಿ ಕಾರ್ಯನಿರ್ವಹಿಸುತ್ತಿರುವ ಮಹಮುದ್ ಜಿಬ್ರಿಲ್ ಈ ವಿಷಯ ತಿಳಿಸಿದ್ದು, ಈ ಸರ್ಕಾರದಲ್ಲಿ ವಿವಿಧ ಪ್ರದೇಶಗಳ ಪ್ರತಿನಿಧಿಗಳು ಇರುತ್ತಾರೆ ಎಂದು ತಿಳಿಸಿದ್ದಾರೆ.

ತಮ್ಮ ಯೋಧರು ಇನ್ನೂ ಲಿಬಿಯಾ ವಿಮೋಚನೆಯ ಕಾರ್ಯದಲ್ಲಿ ನಿರತರಾಗಿದ್ದು, ಬನಿ ವಾಲಿದ್ ಮತ್ತು ಶಿರ್ಟೆ ಪ್ರದೇಶಗಳಲ್ಲಿ ಗಡಾಫಿ ಆಪ್ತರು ಅವಿತಿರುವುದರಿಂದ ಅವರನ್ನು ಬಂಧಿಸುವ ಕಾರ್ಯಾಚರಣೆ ಮುಂದುವರಿದೆ ಎಂದು ತಿಳಿಸಿದ್ದಾರೆ. ರಕ್ತಪಾತವಿಲ್ಲದೆ ಲಿಬಿಯಾ ರಾಜಧಾನಿ ಟ್ರಿಪೋಲಿಯನ್ನು ತಮ್ಮ ಪಡೆ ಕಳೆದ ತಿಂಗಳು ವಶಕ್ಕೆ ತೆದುಕೊಂಡಿರುವುದು ಶ್ಲಾಘನೀಯ ಕೆಲಸ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 ಗಡಾಫಿ ಪುತ್ರ ಪಲಾಯನ

ಲಂಡನ್, (ಪಿಟಿಐ): ಲಿಬಿಯಾದ ಪದಚ್ಯುತ ನಾಯಕ ಮುಅಮ್ಮರ್ ಗಡಾಫಿ ಅವರ ಮೂರನೇ ಪುತ್ರ ಸಾದಿ ಗಡಾಫಿ,  ತನ್ನ ಇಬ್ಬರು ಸಹೋದರರನ್ನು ಬಿಟ್ಟು, ದೇಶ ತೊರೆದು ಪಕ್ಕದ ನೈಗರ್‌ಗೆ ಪಲಾಯನ ಮಾಡಿದ್ದಾನೆ.

ಬೆಂಗಾವಲು ವಾಹನಗಳಲ್ಲಿ ಲಿಬಿಯಾದ ಸಹರಾನ್ ಮರುಭೂಮಿ ಗಡಿಯನ್ನು ಸಾದಿ ದಾಟಿದ್ದಾನೆ. ಅವನನ್ನು ಸ್ಥಳೀಯ ಸೇನಾ ಪಡೆಗಳು ತಡೆಗಟ್ಟಿವೆ ಎಂದು ನೈಗರ್‌ನ ಕಾನೂನು ಸಚಿವ ಮರು ಅಮದು ಭಾನುವಾರ ರಾತ್ರಿ ಹೇಳಿದ್ದಾರೆ. ಸಾದಿ, ಬೆಂಗಾವಲು ವಾಹನಗಳೊಂದಿಗೆ ಉತ್ತರದ ಅಗಾದೆಜ್ ಪಟ್ಟಣ ತಲುಪಿದ್ದಾನೆ.

ತೌರೆಗ್ ಬುಡಕಟ್ಟು ನಾಯಕರು ಹಾಗೂ ಗಡಾಫಿಯ ಉನ್ನತ ಅಧಿಕಾರಿಗಳು ಇತ್ತೀಚೆಗೆ ಆಶ್ರಯ ಪಡೆದಿದ್ದ ರಾಜಧಾನಿ ನೈಮೆ ಕಡೆ ಸಾಗಿದ್ದಾನೆ  ಎಂದು ಅವರು ಹೇಳಿದ್ದಾರೆ.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.