
ರಿಯೊ ಡಿ ಜನೈರೊ (ಎಎಫ್‌ಪಿ): ಸೊಳ್ಳೆಯಿಂದ ಹರಡುವ ಮಾರಕ ಜಿಕಾ ವೈರಸ್‌ನ ಭೀತಿ ತೀವ್ರವಾಗಿದ್ದು, ಅದರ ವಿರುದ್ಧದ ಹೋರಾಟಕ್ಕೆ ಕೈಜೋಡಿಸುವಂತೆ ಬ್ರೆಜಿಲ್, ನೆರೆಯ ದೇಶಗಳಿಗೆ ಮನವಿ ಮಾಡಿದೆ.
ಅಮೆರಿಕ ಮತ್ತು ಯುರೋಪ್‌ಗಳ ನಡುವೆ ಪ್ರಯಾಣಿಸಿದವರಲ್ಲಿ ಇದರ ಸೋಂಕು ಹೆಚ್ಚಾಗಿ ಕಂಡುಬರುತ್ತಿದೆ. ಈ ವೈರಸ್ ಮಕ್ಕಳ ಮೆದುಳಿನ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಸಹಜಕ್ಕಿಂತ ಚಿಕ್ಕತಲೆಯ ಮಕ್ಕಳು ಜನಿಸುತ್ತಿದ್ದಾರೆ.
ಲ್ಯಾಟಿನ್ ಅಮೆರಿಕದ ಸುಮಾರು 20 ದೇಶಗಳಲ್ಲಿ ಜಿಕಾ ವೈರಸ್ ಹರಡಿದ್ದು, ಅಮೆರಿಕ ಖಂಡದ ಕೆನಡಾ ಮತ್ತು ಚಿಲಿ ದೇಶಗಳನ್ನು ಹೊರತುಪಡಿಸಿ ಉಳಿದೆಲ್ಲಾ ದೇಶಗಳಲ್ಲಿ ಕಾಣಿಸಿಕೊಂಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ತಿಳಿಸಿದೆ.
ಇದುವರೆಗೂ 68 ಮಕ್ಕಳು ವೈರಸ್‌ನಿಂದ ಮೃತಪಟ್ಟಿರುವುದಾಗಿ ಬ್ರೆಜಿಲ್‌ನಲ್ಲಿ ಆರೋಗ್ಯ ಸಚಿವಾಲಯ ಹೇಳಿದೆ.. ಲ್ಯಾಟಿನ್ ಅಮೆರಿಕದಿಂದ ಮರಳಿದ ಪ್ರಯಾಸಿಗರಿಂದ ವೈರಸ್ ತನ್ನ ದೇಶಕ್ಕೂ ಬಂದಿರುವುದಾಗಿ ಸ್ವಿಟ್ಜರ್ಲೆಂಡ್ ಮತ್ತು ಡೆನ್ಮಾರ್ಕ್‌ಗಳು ತಿಳಿಸಿವೆ.
ಜಿಕಾ ವೈರಸ್ ಮತ್ತು ಜನಿಸುವ ಮಕ್ಕಳ ತಲೆ ಚಿಕ್ಕದಾಗಿರುವುದರ (ಮೈಕ್ರೊಸೆಫಲಿ) ನಡುವಣ ಸಂಬಂಧ ತಿಳಿಯಲು ಇನ್ನಷ್ಟು ಆಳವಾದ ಸಂಶೋಧನೆಯ ಅಗತ್ಯವಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಕಳೆದ ಅಕ್ಟೋಬರ್‌ನಿಂದ ಸುಮಾರು 4,180 ಮೈಕ್ರೊಸೆಫಲಿಯ ಶಂಕಿತ ಪ್ರಕರಣಗಳು ವರದಿಯಾಗಿವೆ. ಚಿಕ್ಕ ತಲೆಯುಳ್ಳ ಅಸಹಜ ಮಕ್ಕಳ ಜನನಕ್ಕೆ ಜಿಕಾ ವೈರಸ್ ಕಾರಣವೇ ಎಂಬುದಕ್ಕೆ ಖಚಿತ ಉತ್ತರವಿಲ್ಲ. ಈ ಸಮಸ್ಯೆಯ ಗಂಭೀರತೆ ಸಹ ಇನ್ನೂ ಸ್ಪಷ್ಟವಾಗಿಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ.
ಜಿಕಾ ವೈರಸ್ ಪ್ರಭಾವ ಇರುವ ಪ್ರದೇಶಗಳಿಗೆ ತೆರಳದಂತೆ ಗರ್ಭಿಣಿಯರಿಗೆ ಸೂಚನೆ ನೀಡಲಾಗಿದೆ. ಅಲ್ಲದೇ ಈ ಪ್ರದೇಶಗಳಲ್ಲಿನ ಸ್ತ್ರೀಯರು ಗರ್ಭ ಧರಿಸದಂತೆ ಮುನ್ನೆಚ್ಚರಿಕೆ ವಹಿಸಲು ಮನವಿ ಮಾಡಲಾಗಿದೆ.
ಜಿಕಾ ವೈರಸ್‌ಅನ್ನು ಹರಡುತ್ತಿರುವ ಏಡಿಸ್ ಏಜಿಪ್ಟಿ ಸೊಳ್ಳೆಯ ನಿರ್ಮೂಲನೆಗಾಗಿ 22 ಸಾವಿರಕ್ಕೂ ಹೆಚ್ಚು ಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸೇನಾ ಸಿಬ್ಬಂದಿಯೇ ಸೊಳ್ಳೆ ನಿಯಂತ್ರಕ ಔಷಧಗಳನ್ನು ಸಿಂಪಡಿಸುತ್ತಿದ್ದಾರೆ.
*
ಫೆ.1ರಂದು ಸಭೆ
ಜಿನೀವಾ (ಎಎಫ್‌ಪಿ): ಜಿಕಾ ವೈರಸ್‌ಅನ್ನು ನಿಯಂತ್ರಿಸುವ ಮತ್ತು ಲಸಿಕೆ ಕಂಡುಹಿಡಿಯುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಫೆಬ್ರುವರಿ 1ರಂದು ತುರ್ತು ಸಭೆ ಕರೆದಿದೆ.
‘ಅಪಾಯಕಾರಿ ಜಿಕಾ ವೈರಸ್ ಸ್ಫೋಟಕ ರೀತಿಯಲ್ಲಿ ಹರಡುತ್ತಿದೆ. ಎಚ್ಚರಿಕೆಯ ಮಟ್ಟ ಅತಿ ಮೇಲ್ಮಟ್ಟಕ್ಕೆ ತಲುಪಿದೆ’ ಎಂದು ಡಬ್ಲ್ಯೂಎಚ್‌ಒ ಮುಖ್ಯಸ್ಥೆ ಮಾರ್ಗರೆಟ್ ಹೇಳಿದ್ದಾರೆ.
ಅಮೆರಿಕದಲ್ಲೇ 40 ಲಕ್ಷ ಸೋಂಕಿತರು?: ಅಮೆರಿಕದಲ್ಲಿ 30ರಿಂದ 40 ಲಕ್ಷ ಮಂದಿ ‘ಝಿಕಾ’ ವೈರಸ್ ಸೋಂಕಿನಿಂದ ಬಳಲುತ್ತಿದ್ದು, ಈ ಪ್ರಮಾಣ ಹೆಚ್ಚಬಹುದು ಎಂದು ಡಬ್ಲ್ಯೂಎಚ್‌ಒ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.