ADVERTISEMENT

ವಿದೇಶಗಳಲ್ಲಿ ಗಾಂಧಿ ಜಯಂತಿ ಆಚರಣೆ

ಪಿಟಿಐ
Published 2 ಅಕ್ಟೋಬರ್ 2017, 19:30 IST
Last Updated 2 ಅಕ್ಟೋಬರ್ 2017, 19:30 IST
ಭಾರತದ ಹೈಕಮಿಷನರ್‌ ನೀನದ್‌ ದೇಶಪಾಂಡೆ ಅವರು ಸಿಂಗಪುರದ ಗ್ಲೋಬಲ್‌ ಇಂಟರ್‌ನ್ಯಾಷನಲ್‌ ಶಾಲೆಯ ಆವರಣದಲ್ಲಿರುವ ಗಾಂಧಿ ಪ್ರತಿಮೆಗೆ ಹೂಮಾಲೆ ಹಾಕಿದರು
ಭಾರತದ ಹೈಕಮಿಷನರ್‌ ನೀನದ್‌ ದೇಶಪಾಂಡೆ ಅವರು ಸಿಂಗಪುರದ ಗ್ಲೋಬಲ್‌ ಇಂಟರ್‌ನ್ಯಾಷನಲ್‌ ಶಾಲೆಯ ಆವರಣದಲ್ಲಿರುವ ಗಾಂಧಿ ಪ್ರತಿಮೆಗೆ ಹೂಮಾಲೆ ಹಾಕಿದರು   

ಆಮಸ್ಟರ್‌ಡ್ಯಾಮ್‌/ ಬೀಜಿಂಗ್‌/ ಸಿಂಗಪುರ : ಅಹಿಂಸೆ, ಶಾಂತಿ ಸಂದೇಶ ಸಾರಿದ ಮಹಾತ್ಮ ಗಾಂಧಿ ಜಯಂತಿಯನ್ನು ಹಲವು ದೇಶಗಳಲ್ಲಿ ಆಚರಿಸಲಾಯಿತು.

ಹೇಗ್‌ ನಗರದಲ್ಲಿ ಆಯೋಜಿಸಿದ್ದ ‘ಗಾಂಧಿ ನಡಿಗೆ’ ಕಾರ್ಯಕ್ರಮದಲ್ಲಿ ನೂರಾರು ನಾಗರಿಕರು ಪಾಲ್ಗೊಂಡಿದ್ದರು. ನೆದರ್‌ಲ್ಯಾಂಡ್ಸ್ ನಲ್ಲಿನ ಭಾರತದ ರಾಯಭಾರಿ ವೇಣು ರಾಜಮೊನಿ, ಉಪಮೇಯರ್‌ಗಳಾದ ರಾಬಿನ್‌ ಬಾಲ್ಡೀವ್‌ ಸಿಂಗ್‌ ಮತ್ತು ಕಾರ್‌ಸ್ಟನ್‌ ಕ್ಲೆನ್‌ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಗಾಂಧೀಜಿ ಅವರು ಅಳವಡಿಸಿಕೊಂಡ ತತ್ವಸಿದ್ಧಾಂತ ಗಳನ್ನು ತಿಳಿಸುವ ಸಲುವಾಗಿ ‘ಗಾಂಧಿ ನಡಿಗೆ’ ಏರ್ಪಡಿಸಲಾಗಿತ್ತು. ಇದಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ್ದ ಟೀಶರ್ಟ್‌ಗಳನ್ನು ಧರಿಸಿದ್ದ ನಾಗರಿಕರು, ಅಹಿಂಸಾ ತತ್ವವನ್ನು ಸಾರುವ ಘೋಷಣೆಗಳನ್ನು ಕೂಗಿದರು. ಬಳಿಕ ಮಹಾತ್ಮ ಗಾಂಧಿ ಅವರು ಬಳಸಿದ್ದ ಬೈಸಿಕಲ್‌ಗೆ ನಾಗರಿಕರು ವಿಶೇಷ ಗೌರವ ಸಲ್ಲಿಸಿದರು. ಭಾರತದ ಗಾಂಧಿ ಸ್ಮಾರಕ ಟ್ರಸ್ಟ್‌ ಈ ಬೈಸಿಕಲ್‌ ಅನ್ನು ವಿಶೇಷ ಕಾಣಿಕೆ ರೂಪದಲ್ಲಿ ನೆದರ್‌ಲ್ಯಾಂಡ್ಸ್‌ಗೆ ನೀಡಿದೆ. ನೆದರ್‌ಲ್ಯಾಂಡ್ಸ್ ಸೈಕಲ್‌ ಜನಪ್ರಿಯತೆ ಪಡೆದಿರುವುದರಿಂದ ಈ ಬೈಸಿಕಲ್‌ ನೀಡಲಾಗಿತ್ತು.

ADVERTISEMENT

ರಂಗಭೂಮಿ ಕಲಾವಿದರು ‘ಸತ್ಯಾಗ್ರಹ’ ನಾಟಕವನ್ನು ಪ್ರದರ್ಶಿಸಿದರು. ಗಾಂಧಿ ಅವರನ್ನು ಕುರಿತ ಹಾಡುಗಳನ್ನೂ ಪ್ರಸ್ತುತಪಡಿಸಲಾಯಿತು.

ಬೀಜಿಂಗ್‌ನ ಚಾವೊಯಾಂಗ್‌ ಉದ್ಯಾನದಲ್ಲಿ ಗಾಂಧೀಜಿ ಅವರ ನೆಚ್ಚಿನ ಭಜನೆಗಳನ್ನು ಹಾಡಲಾಯಿತು. ಶಾಲೆಯ ಮಕ್ಕಳು ಹಸಿರು ಮತ್ತು ಬಿಳಿ ವಸ್ತ್ರ, ಕೆಂಪು ಸ್ಕಾರ್ಫ್‌ ತೊಟ್ಟು ಗಾಂಧೀಜಿ ಅವರ ಹೇಳಿಕೆಗಳನ್ನು ಸ್ಮರಿಸಿದರು.

ಭಾರತದ ರಾಯಭಾರಿ ವಿಲ್ಸನ್‌ ಬಾಬು ಅವರು ಮಾತನಾಡಿ, ‘ಅಹಿಂಸಾ ತತ್ವದ ಮೂಲಕ ಗಾಂಧೀಜಿ ಅವರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಮಾರ್ಟಿನ್‌ ಲೂಥರ್‌ ಕಿಂಗ್‌ ಮತ್ತು ನೆಲ್ಸನ್‌ ಮಂಡೇಲಾರಂಥ ನಾಯಕರು ಗಾಂಧೀಜಿಯವರ ಮಾರ್ಗದಿಂದ ಪ್ರೇರಣೆ ಪಡೆದಿದ್ದರು’ ಎಂದು ಹೇಳಿದರು.

ಸಿಂಗಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ಲೋಬಲ್‌ ಇಂಟರ್‌ ನ್ಯಾಷನಲ್‌ ಶಾಲೆಯ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಭಾರತದ ಹೈಕಮಿಷನರ್‌ ನೀನಾದ್‌ ದೇಶಪಾಂಡೆ ಅವರು ಮಹಾತ್ಮಾ ಗಾಂಧೀಜಿ ಅವರ ಪ್ರತಿಮೆಗೆ ಹೂವಿನ ಹಾರ ಹಾಕಿದರು. ಬಳಿಕ ಗಾಂಧೀಜಿ ಅವರ ಶಾಂತಿ ಸಂದೇಶಗಳ ಕುರಿತು ಮಾತನಾಡಿದರು. ಮಕ್ಕಳಿಗಾಗಿ ವಿಶೇಷ ಉಪನ್ಯಾಸ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.