ADVERTISEMENT

ವಿದೇಶಿ ಸಂಕ್ಷಿಪ್ತ ಸುದ್ದಿಗಳು

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2011, 6:05 IST
Last Updated 15 ಸೆಪ್ಟೆಂಬರ್ 2011, 6:05 IST

ಭಾರತ ಭೇಟಿಗೆ ಮಲಿಕ್ ಒಪ್ಪಿಗೆ
ಇಸ್ಲಾಮಾಬಾದ್(ಐಎಎನ್‌ಎಸ್):
ಪಾಕಿಸ್ತಾನಕ್ಕೆ ತೆರಳಿದ್ದ ಅಖಿಲ ಭಾರತ ವಕೀಲರ ಸಂಘದ 25 ಸದಸ್ಯರನ್ನು ಒಳಗೊಂಡ ನಿಯೋಗ, ಭಾರತಕ್ಕೆ ಬಂದು ತಮ್ಮನ್ನು ಉದ್ದೇಶಿಸಿ ಮಾತನಾಡುವಂತೆ ನೀಡಿದ ಆಹ್ವಾನವನ್ನು  ಒಳಾಡಳಿತ ಸಚಿವ ರೆಹಮಾನ್ ಮಲಿಕ್ ಒಪ್ಪಿಕೊಂಡಿದ್ದಾರೆ.

ಕಾರು ಕಳ್ಳರಿಂದ ಭಾರತೀಯನ ಕೊಲೆ
ಲಂಡನ್, (ಪಿಟಿಐ):
ಕಾರು ಕಳ್ಳರ ದಾಳಿಯಿಂದ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಸಾವಿಗೀಡಾದ ದುರ್ಘಟನೆ ಇಲ್ಲಿನ ಸ್ಕಾಟ್‌ಲೆಂಡ್ ಯಾರ್ಡ್‌ನಲ್ಲಿ ನಡೆದಿದೆ. ಕಳ್ಳರು ಕಾರಿನ ಕೀಲಿಕೈ ಕೇಳಿದಾಗ ಕೊಡಲು ನಿರಾಕರಿಸಿದ ಹರ್ಜಿಂದರ್ ಸಿಂಗ್ ಅವರ ಎದೆಗೆ ಕಳ್ಳರು ಚೂರಿಯಿಂದ ತಿವಿದರು. ಬಳಿಕ ಕೀಲಿಕೈಯನ್ನು ಕಸಿದುಕೊಂಡು ಕಾರಿನೊಂದಿಗೆ ಪರಾರಿಯಾದರು ಎಂದು ವರದಿ ತಿಳಿಸಿದೆ.

ಕೊನೆಗೊಂಡ ಉಗ್ರರ ದಾಳಿ: 27 ಬಲಿ
ಕಾಬೂಲ್, (ಎಎಫ್‌ಪಿ):
ಅಮೆರಿಕದ ರಾಯಭಾರ ಕಚೇರಿ ಸಮೀಪ ಇರುವ ನ್ಯಾಟೊ ಕಚೇರಿ ಮೇಲೆ ತಾಲಿಬಾನ್ ಉಗ್ರರು ನಡೆಸಿದ ದಾಳಿ ಹಾಗೂ ಭದ್ರತಾಪಡೆಗಳ ಪ್ರತಿದಾಳಿಯಲ್ಲಿ 27 ಮಂದಿ ಸಾವಿಗೀಡಾಗಿದ್ದಾರೆ. ಮಂಗಳವಾರದಿಂದ ಆರಂಭವಾಗಿ ಸುಮಾರು 20 ಗಂಟೆಗಳ ಕಾಲ ಈ ಕಾಳಗ ನಡೆಯಿತು.

ಇರಾಕ್‌ನಲ್ಲಿ ಬಾಂಬ್ ದಾಳಿ: 19 ಸಾವು
ಹಿಲ್ಲ (ಇರಾಕ್):
ಭದ್ರತಾ ಪಡೆಗಳನ್ನು ಗುರಿಯಾಗಿಟ್ಟು ಉಗ್ರರು ನಡೆಸಿದ ಕಾರ್ ಬಾಂಬ್ ದಾಳಿಯಲ್ಲಿ 19 ಜನ ಮೃತರಾಗಿ 50 ಮಂದಿ ಗಾಯಗೊಂಡಿದ್ದಾರೆ.

ಪೋಪ್ ವಿರುದ್ಧ ದಾವೆ
ದಿ ಹೇಗ್, (ಐಎಎನ್‌ಎಸ್/ಎಕೆಐ):
ಪಾದ್ರಿಗಳಿಂದ ಮಕ್ಕಳ  ಮೇಲೆ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ  ಆರೋಪ ಎದುರಿಸುತ್ತಿರುವ 16ನೇ ಪೋಪ್ ಬೆನೆಡಿಕ್ಟ್ ಮತ್ತು ಇತರ ಮೂವರು ವ್ಯಾಟಿಕನ್ ಅಧಿಕಾರಿಗಳ ವಿರುದ್ಧ ಎರಡು ಸಂಘಟನೆಗಳು ಇಲ್ಲಿನ ಅಂತರ ರಾಷ್ಟ್ರೀಯ ನ್ಯಾಯಾಲಯದಲ್ಲಿ ದಾವೆ ಹೂಡಿವೆ.

ಚೀನಾ: ಕೊಡಲಿ ಏಟಿನಿಂದ ನಾಲ್ವರ ಸಾವು
ಬೀಜಿಂಗ್, (ಪಿಟಿಐ):
ಇಲ್ಲಿನ ಹೆನನ್ ಪ್ರಾಂತ್ಯದ ಜೆಂಗ್‌ಜೌನಲ್ಲಿ ಮಾನಸಿಕ ಅಸ್ವಸ್ಥನೊಬ್ಬ ನಡೆಸಿದ ಕೊಡಲಿಯೇಟಿನ ದಾಳಿಯಲ್ಲಿ ಪುಟ್ಟ ಬಾಲಕಿ ಸೇರಿದಂತೆ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT