ADVERTISEMENT

ವಿದ್ಯಾರ್ಥಿ ರವಿ ಗಡಿಪಾರು ಇಲ್ಲ

​ಪ್ರಜಾವಾಣಿ ವಾರ್ತೆ
Published 19 ಜೂನ್ 2012, 19:30 IST
Last Updated 19 ಜೂನ್ 2012, 19:30 IST

ನ್ಯೂಯಾರ್ಕ್ (ಪಿಟಿಐ): ಸಲಿಂಗಕಾಮಿ ಸ್ನೇಹಿತನ ಖಾಸಗಿ ಕ್ಷಣಗಳನ್ನು ರಹಸ್ಯವಾಗಿ ಕ್ಯಾಮೆರಾದಲ್ಲಿ ಸೆರೆಹಿಡಿದ ಅಪರಾಧಕ್ಕಾಗಿ ಒಂದು ತಿಂಗಳ ಜೈಲು ಶಿಕ್ಷೆಗೆ ಒಳಗಾಗಿ ಬಿಡುಗಡೆಯಾಗಿರುವ ಭಾರತೀಯ ಮೂಲದ ವಿದ್ಯಾರ್ಥಿ ಧರುಣ್ ರವಿಯನ್ನು ಭಾರತಕ್ಕೆ ಗಡಿಪಾರು ಮಾಡದಿರಲು ನ್ಯಾಯಾಲಯ ನಿರ್ಧರಿಸಿದೆ.

ಮಿಡ್ಲ್‌ಸೆಕ್ಸ್ ಕೌಂಟಿ ಜೈಲಿನಲ್ಲಿದ್ದ ರವಿಯನ್ನು 20 ದಿನಗಳ ಶಿಕ್ಷೆಯ ನಂತರ ಬಿಡುಗಡೆ ಮಾಡಲಾಗಿದೆ.

ಜೈಲಿನಲ್ಲಿ ರವಿ ತೋರಿದ ಸನ್ನಡತೆಗಾಗಿ 5 ದಿನಗಳ ಹಾಗೂ ಜೈಲಿನಲ್ಲಿ ಕೆಲಸ ಮಾಡಿದ್ದಕ್ಕೆ 5 ದಿನಗಳ ರಿಯಾಯ್ತಿ ನೀಡಿ ಆತನಿಗೆ ವಿಧಿಸಿದ್ದ 30 ದಿನಗಳ ಶಿಕ್ಷೆಯನ್ನು 20 ದಿನಗಳಿಗೆ ಇಳಿಸಲಾಗಿದೆ.

ತನ್ನ ಕೊಠಡಿಯ ಸಹಚರ ಟೇಲರ್ ಕ್ಲೆಮೆಂಟಿ ಇನ್ನೊಬ್ಬ ಸ್ನೇಹಿತನ ಜತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದನ್ನು ವೆಬ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದ. ಇದರಿಂದ ಬೇಸತ್ತ ಟೇಲರ್‌ಸೇತುವೆಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಆತ್ಮಹತ್ಯೆಗೆ ಮೊದಲು ಇತರ ಸ್ನೇಹಿತರ ಬಳಿ ರವಿ ನಡೆಸಿದ್ದ ರಹಸ್ಯ ಕೃತ್ಯದ ಬಗ್ಗೆ ತಿಳಿಸಿದ್ದ.

ಐದು ವರ್ಷದವನಿದ್ದಾಗಲೇ ರವಿ ತನ್ನ ಪಾಲಕರೊಡನೆ ಅಮೆರಿಕಕ್ಕೆ ತೆರಳಿ ಅಲ್ಲಿಯ ಕಾಯಂ ನಿವಾಸಿಯಾಗಿದ್ದಾನೆ.

ಜೈಲಿನಲ್ಲಿ ಉತ್ತಮವಾಗಿ ನಡೆದುಕೊಂಡಿದ್ದರಿಂದ ಹಾಗೂ ಬೇರಾವುದೇ ಅಪರಾಧ ಹಿನ್ನೆಲೆ ಇಲ್ಲವಾದ್ದರಿಂದ ಆತನನ್ನು ಭಾರತಕ್ಕೆ ಗಡಿಪಾರು ಮಾಡದಿರಲು ಸದ್ಯಕ್ಕೆ ನಿರ್ಧರಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.