ADVERTISEMENT

ವಿದ್ಯಾರ್ಥಿ ಹಾಸ್ಟೆಲ್‌ ಮೇಲೆ ಉಗ್ರರ ದಾಳಿ

ಪಿಟಿಐ
Published 1 ಡಿಸೆಂಬರ್ 2017, 19:30 IST
Last Updated 1 ಡಿಸೆಂಬರ್ 2017, 19:30 IST
ವಿದ್ಯಾರ್ಥಿ ಹಾಸ್ಟೆಲ್‌ ಮೇಲೆ ಉಗ್ರರ ದಾಳಿ
ವಿದ್ಯಾರ್ಥಿ ಹಾಸ್ಟೆಲ್‌ ಮೇಲೆ ಉಗ್ರರ ದಾಳಿ   

ಪೆಷಾವರ: ತಾಲಿಬಾನ್ ಉಗ್ರರು ಇಲ್ಲಿನ ಕೃಷಿ ತರಬೇತಿ ಸಂಸ್ಥೆಯ ವಿದ್ಯಾರ್ಥಿ ನಿಲಯದ ಮೇಲೆ ಶುಕ್ರವಾರ ಗುಂಡಿನ ದಾಳಿ ನಡೆಸಿದ್ದು, ವಿದ್ಯಾರ್ಥಿಗಳು ಸೇರಿದಂತೆ 12 ಜನ ಮೃತಪಟ್ಟಿದ್ದಾರೆ. ಪತ್ರಕರ್ತರು, ಪೊಲೀಸರನ್ನೂ ಒಳಗೊಂಡು 32 ಜನ ಗಾಯಗೊಂಡಿದ್ದಾರೆ. ಬಳಿಕ ಭದ್ರತಾ ಪಡೆ ಎಲ್ಲ ಉಗ್ರರನ್ನೂ ಕೊಂದು ಹಾಕಿದೆ.

ಆಟೊರಿಕ್ಷಾದಲ್ಲಿ ಬಂದ, ಬುರ್ಖಾ ತೊಟ್ಟ ಐವರು ಉಗ್ರರು ವಿಶ್ವವಿದ್ಯಾಲಯ ರಸ್ತೆಯಲ್ಲಿರುವ ವಿದ್ಯಾರ್ಥಿ ನಿಲಯದ ಮೇಲೆ ಸ್ವಯಂಚಾಲಿತ ಶಸ್ತ್ರಾಸ್ತ್ರಗಳ ಮೂಲಕ ಮನಬಂದಂತೆ ಆಕ್ರಮಣ ಮಾಡಿ ತೀವ್ರ ಆತಂಕ ಸೃಷ್ಟಿಸಿದರು. ಈದ್‌ ಮಿಲಾದ್‌ ಪ್ರಯುಕ್ತ ಸಂಸ್ಥೆಗೆ ರಜೆ ಘೋಷಿಸಲಾಗಿತ್ತಾದರೂ ಸುಮಾರು 100 ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ ಇದ್ದರು.

ತೆಹ್ರಿಕ್-ಎ-ತಾಲಿಬಾನ್ ಸಂಘಟನೆಯು ದಾಳಿಯ ಹೊಣೆ ಹೊತ್ತಿದೆ. ಉಗ್ರರು ಮತ್ತು ಭದ್ರತಾ ಪಡೆ ನಡುವೆ ಒಂದು ಗಂಟೆ ಕಾಲ ಗುಂಡಿನ ಕಾಳಗ ನಡೆಯಿತು. ಈ ಸಂದರ್ಭದಲ್ಲಿ, ಸಂಸ್ಥೆಯ ಆವರಣದೊಳಗೆ ಆಗಾಗ್ಗೆ ಗುಂಡಿನ ದಾಳಿ ಮತ್ತು ಸ್ಫೋಟದ ಸದ್ದು ಕೇಳಿಬರುತ್ತಿತ್ತು. ಉಗ್ರರಿಂದ ಆತ್ಮಹತ್ಯಾ ಕವಚ, ಗನ್ನುಗಳು, ಪಿಸ್ತೂಲುಗಳು, ಎ.ಕೆ 47 ಬಂದೂಕು, ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.

ADVERTISEMENT

‘ಪೊಲೀಸರು ಮತ್ತು ಸೇನೆ ಸಕಾಲದಲ್ಲಿ ಕ್ರಮ ಕೈಗೊಂಡಿದ್ದು ಸಾವಿನ ಸಂಖ್ಯೆಯನ್ನು ತಗ್ಗಿಸಿತು’ ಎಂದು ಖಿಬರ್‌– ಪಖ್ತುಂಖ್ವಾ ಪ್ರದೇಶದ ಪೊಲೀಸ್‌ ಮಹಾನಿರ್ದೇಶಕ ಸಲಾವುದ್ದೀನ್‌ ಮೆಹಸೂದ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.