ADVERTISEMENT

ವಿಶ್ವಸಂಸ್ಥೆ ಒಪ್ಪಿಗೆ ಅಗತ್ಯ: ರಷ್ಯಾ

ಸಿರಿಯಾ ಮೇಲೆ ಅಮೆರಿಕದ ಸೇನಾ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 19:59 IST
Last Updated 5 ಸೆಪ್ಟೆಂಬರ್ 2013, 19:59 IST

ಮಾಸ್ಕೊ (ಎಪಿ/ಎಎಫ್‌ಪಿ/ಪಿಟಿಐ/ಐಎಎನ್‌ಎಸ್): ಸಿರಿಯಾದ ಮೇಲೆ ಅಮೆರಿಕ ಯಾವುದೇ ಸೇನಾ ದಾಳಿ ನಡೆಸಿದರೂ, ಆ ದೇಶದಲ್ಲಿರುವ ಪರಮಾಣು ಸಂಶೋಧನಾ ರಿಯಾಕ್ಟರ್‌ಗೆ ಹಾನಿಯಾಗುವುದನ್ನು ಮುಂದಿನ ವಾರ ನಡೆಯಲಿರುವ ವಿಶ್ವಸಂಸ್ಥೆಯ ಅಣ್ವಸ್ತ್ರ ಕಾವಲುಪಡೆ ಸಭೆಯಲ್ಲಿ ಪ್ರಸ್ತಾಪಿಸುವುದಾಗಿ ರಷ್ಯಾ ಗುರುವಾರ ತಿಳಿಸಿದೆ.

ವಿಯೆನ್ನಾದಲ್ಲಿ ಈ ತಿಂಗಳ 9ರಂದು ನಡೆಯುವ ಅಂತರರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆ (ಐಎಇಎ) ಗವರ್ನರ್‌ಗಳ ಮಂಡಳಿಯ ಶರತ್ಕಾಲದ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಲಾಗುವುದು ಎಂದು ರಷ್ಯಾ ವಿದೇಶಾಂಗ ಸಚಿವಾಲಯದ ವಕ್ತಾರರು ಇಲ್ಲಿ ತಿಳಿಸಿದ್ದಾರೆ.

ಪುಟಿನ್ ಅಸಮ್ಮತಿ: ಇದಲ್ಲದೆ, `ವಿಶ್ವಸಂಸ್ಥೆಯ ಒಪ್ಪಿಗೆ ಪಡೆಯದೆ ಸಿರಿಯಾದ ಮೇಲೆ ಅಮೆರಿಕ ದಾಳಿ ನಡೆಸಿದರೆ, ಅದು ಆಕ್ರಮಣ ಎಂದಾಗುತ್ತದೆ ಮತ್ತು ಅಣ್ವಸ್ತ್ರ ಭದ್ರತೆಗೆ ಧಕ್ಕೆ ತರುವ ಕ್ರಮವಾಗುತ್ತದೆ' ಎಂದು ರಷ್ಯಾ ಎಚ್ಚರಿಕೆ ನೀಡಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಒಪ್ಪಿಗೆ ಇಲ್ಲದೆ ಅಮೆರಿಕ ದಾಳಿ ನಡೆಸಿದರೆ, ಅದಕ್ಕೆ ಪಾಶ್ಚಿಮಾತ್ಯ ರಾಷ್ಟ್ರಗಳು ಬೆಂಬಲ ನೀಡುವುದಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿರುವುದಾಗಿ ಸುದ್ದಿಸಂಸ್ಥೆಗಳು ವರದಿ ಮಾಡಿವೆ.

ಇದರೊಂದಿಗೆ, `ಸಿರಿಯಾಕ್ಕೆ ಸಂಬಂಧಿಸಿದ ಬೆಳವಣಿಗೆಗಳ ಕುರಿತು ನೇರ ಮಾತುಕತೆ ನಡೆಸುವ ತನ್ನ ಯತ್ನಕ್ಕೆ ಅಮೆರಿಕ ಸಹಕಾರ ನೀಡದೆ ತಪ್ಪಿಸಿಕೊಳ್ಳುತ್ತಿದೆ' ಎಂದು ರಷ್ಯಾ ವಿದೇಶಾಂಗ ಸಚಿವಾಲಯ ಆರೋಪಿಸಿದೆ.

ಇರಾನ್ ಆರೋಪ
ಟೆಹರಾನ್ ವರದಿ:  `ಸಿರಿಯಾ ಸರ್ಕಾರ ತನ್ನದೇ ಜನರ ಮೇಲೆ ರಾಸಾಯನಿಕ ಅಸ್ತ್ರಗಳನ್ನು ಬಳಸಿದೆ ಎಂಬ ಆರೋಪವು ಆ ದೇಶದ ಮೇಲೆ ದಾಳಿ ಮಾಡಲು ಪಾಶ್ಚಿಮಾತ್ಯರು ನಡೆಸಿರುವ ಸಂಚು' ಎಂದು ಇರಾನ್ ಪರಮೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಗುರುವಾರ ಇಲ್ಲಿ ಆರೋಪಿಸಿದ್ದಾರೆ.

ಇಂತಹ ದಾಳಿಯ ಯಾವುದೇ ಪ್ರಯತ್ನ ನಡೆಸದಂತೆ ಅವರು ಅಮೆರಿಕ ಮತ್ತಿತರ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಈ ಮಧ್ಯೆ ಅಲ್‌ಖೈದಾ ಸಂಪರ್ಕದ ಬಂಡುಕೋರರು ಪಶ್ಚಿಮ ಸಿರಿಯಾದ ಜನನಿಬಿಡ ಕ್ರೈಸ್ತ ಗ್ರಾಮವೊಂದರ ಮೇಲೆ ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.