ADVERTISEMENT

‘ಶಿಶುವನ್ನು ಕೊಂದು, ಹೆಂಡತಿಯ ಮೇಲೆ ಅತ್ಯಾಚಾರವೆಸಗಿದ್ದರು’ ಎಂಬ ಆರೋಪ ತಳ್ಳಿಹಾಕಿದ ತಾಲಿಬಾನ್‌

ಏಜೆನ್ಸೀಸ್
Published 15 ಅಕ್ಟೋಬರ್ 2017, 11:44 IST
Last Updated 15 ಅಕ್ಟೋಬರ್ 2017, 11:44 IST
ಮಗನ ಜತೆ ಇರುವ ಕೆನಡಾ ಪ್ರಜೆ ಜೋಶುವಾ ಬೋಯ್ಲೆ
ಮಗನ ಜತೆ ಇರುವ ಕೆನಡಾ ಪ್ರಜೆ ಜೋಶುವಾ ಬೋಯ್ಲೆ   

ಪೇಶಾವರ:ಉಗ್ರರು ನನ್ನ ಶಿಶುವನ್ನು ಕೊಂದು, ಹೆಂಡತಿಯ ಮೇಲೆ ಅತ್ಯಾಚಾರವೆಸಗಿದ್ದರು’ ಎಂದು ಹೇಳಿದ್ದ ಕೆನಡಾ ಪ್ರಜೆ ಜೋಶುವಾ ಬೋಯ್ಲೆ ಹೇಳಿಕೆಯನ್ನು ತಾಲಿಬಾನ್‌ ಉಗ್ರ ಸಂಘಟನೆ ತಿರಸ್ಕರಿಸಿದೆ.

ಮೂರು ಮಕ್ಕಳು ಹಾಗೂ ಹೆಂಡತಿ ಕೈಟ್ಲಾನ್‌ ಕೋಲ್ಮಾನ್‌ ಜತೆಗೆ ಜೋಶುವಾ ಬೋಯ್ಲೆಯನ್ನು ತಾಲಿಬಾನ್‌ ಉಗ್ರರು 2012ರಲ್ಲಿ ಅಪಹರಿಸಿ, ತನ್ನ ನಿಯಂತ್ರಣದಲ್ಲಿರುವ ಪಾಕಿಸ್ತಾನ–ಆಫ್ಘಾನಿಸ್ತಾನ ಗಡಿ ಪ್ರದೇಶದಲ್ಲಿ ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದರು. ಅಮೆರಿಕ ಸಂಜಾತ ಕೋಲ್ಮಾನ್‌ ಆ ಸಂದರ್ಭದಲ್ಲಿ ತುಂಬು ಗರ್ಭಿಣಿಯಾಗಿದ್ದರು. ಉಗ್ರರ ವಶದಲ್ಲಿದ್ದಾಗಲೇ ದಂಪತಿಗೆ ನಾಲ್ಕನೇ ಮಗು ಜನಿಸಿತ್ತು.

ಬುಧವಾರ ಈ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ್ದ ಪಾಕಿಸ್ತಾನ ಸೇನೆ ಕುಟುಂಬವನ್ನು ರಕ್ಷಿಸಿತ್ತು. ಹೀಗಾಗಿ ಜೋಶುವಾ ಕುಟುಂಬ ಶುಕ್ರವಾರ ತಡಾರಾತ್ರಿ ಸುರಕ್ಷಿತವಾಗಿ ಕೆನಡಾ ತಲುಪಿತ್ತು.

ADVERTISEMENT

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಜೋಶುವಾ, ಸಂಘಟನೆಯ ವಿರುದ್ಧ ‘ಶಿಶು ಕೊಲೆ ಹಾಗೂ ಅತ್ಯಾಚಾರ’ ಆರೋಪ ಮಾಡಿದ್ದರು.

ಆತ್ಯಾಚಾರದ ಆರೋಪವನ್ನು ಅಲ್ಲಗಳೆದಿರುವ ಸಂಘಟನೆಯ ವಕ್ತಾರ ಜುಬಿವುಲ್ಲಾ ಮುಜಾಹೀದ್‌, ‘ಇದು ಕುಟುಂಬದ ರಕ್ಷಣಾ ಕಾರ್ಯಾಚರಣೆ ನಡೆಸಿದ ಸೇನೆಗೆ ಸಹಕರಿಸಿದ ಸರ್ಕಾರಗಳು ಮಾಡುತ್ತಿರುವ ಪ್ರಚಾರ. ಸರ್ಕಾರ, ಕುಟುಂಬದವರು ಇಂತಹ ಹೇಳಿಕೆ ನೀಡುವುದನ್ನು ಬಯಸಿತ್ತು. ಅದಕ್ಕಾಗಿ ಕುಟುಂಬದ ಮೇಲೆ ಒತ್ತಡವನ್ನೂ ಹೇರಲಾಗಿದೆ’ ಎಂದು ದೂರಿದ್ದಾನೆ.

‘ನಾವು ಕೆನಡಾ ಕುಟುಂಬ ಮಾಡುತ್ತಿರುವ ಸುಳ್ಳು ಹಾಗೂ ಯೋಜಿತ ಆರೋಪವನ್ನು ಬಲವಾಗಿ ತಿರಸ್ಕರಿಸುತ್ತೇವೆ’ ಎಂದೂ ಹೇಳಿದ್ದಾನೆ.

ಅತ್ಯಾಚಾರದ ಜತೆ ಶಿಶುವನ್ನು ಕೊಂದಿರುವ ಆರೋಪವನ್ನೂ ತಳ್ಳಿ ಹಾಕಿರುವ ಜುಬಿವುಲ್ಲಾ, ‘ಮಗು ಸತ್ತಿರುವುದು ಸತ್ಯ. ಆದರೆ, ಅದು ಖಾಯಿಲೆಯಿಂದ ಸಾವನ್ನಪ್ಪಿದೆ’ ಎಂದು ಸ್ಪಷ್ಟನೆ ನೀಡಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.