ADVERTISEMENT

ಶೃಂಗಸಭೆ ರದ್ದು: ಉತ್ತರ ಕೊರಿಯಾ ಬೆದರಿಕೆ

ಅಮೆರಿಕ–ದಕ್ಷಿಣ ಕೊರಿಯಾ ಸೇನೆಗಳ ಜಂಟಿ ಸಮರಾಭ್ಯಾಸಕ್ಕೆ ಆಕ್ಷೇಪ

ಏಜೆನ್ಸೀಸ್
Published 16 ಮೇ 2018, 19:30 IST
Last Updated 16 ಮೇ 2018, 19:30 IST
ಟ್ರಂಪ್ ಮತ್ತು ಕಿಮ್‌ ಜಾಂಗ್‌ ಉನ್‌
ಟ್ರಂಪ್ ಮತ್ತು ಕಿಮ್‌ ಜಾಂಗ್‌ ಉನ್‌   

ಸೋಲ್: ಪರಮಾಣು ಶಸ್ತ್ರಾಸ್ತ್ರ ತ್ಯಜಿಸುವಂತೆ ಏಕಪಕ್ಷೀಯವಾಗಿ ಒತ್ತಡ ಹೇರಿದರೆ ಅಮೆರಿಕ ಅಧ್ಯಕ್ಷ ಟ್ರಂಪ್ ಜತೆಗೆ ನಡೆಯಬೇಕಿರುವ ಶೃಂಗಸಭೆ ರದ್ದುಪಡಿಸಲಾಗುವುದು ಎಂದು ಉತ್ತರ ಕೊರಿಯಾ ಬೆದರಿಕೆ ಹಾಕಿದೆ.

ಅಮೆರಿಕ ಮತ್ತು ದಕ್ಷಿಣ ಕೊರಿಯಾ ರಾಷ್ಟ್ರಗಳ ಸೇನೆಗಳ ಜಂಟಿ ಸಮರಾಭ್ಯಾಸವನ್ನು ‘ಅಸಭ್ಯ ಮತ್ತು ದುಷ್ಟ ಪ್ರಚೋದನೆಯ ನಡೆ’ ಎಂದು ಉತ್ತರ ಕೊರಿಯಾದ ಉಪ ವಿದೇಶಾಂಗ ಸಚಿವ ಕಿಮ್‌ ಕೀ ಗ್ವಾನ್ ಹೇಳಿದರು. ದಕ್ಷಿಣ ಕೊರಿಯಾ ಜತೆಗೆ ಬುಧವಾರ ನಡೆಯಬೇಕಿದ್ದ ಉನ್ನತಮಟ್ಟದ ಮಾತುಕತೆಯನ್ನು ಉತ್ತರಕೊರಿಯಾ ರದ್ದುಪಡಿಸಿದೆ.

‘ಅಮೆರಿಕ ಮತ್ತು ದಕ್ಷಿಣ ಕೊರಿಯಾ ಕೈಗೊಂಡಿರುವ ಇಂತಹ ನಿರ್ಧಾರಗಳು ದಿಢೀರ್‌ ನಾಟಕೀಯ ಬೆಳವಣಿಗೆಗೆ ಕಾರಣವಾಗಿವೆ. ಜೂನ್ 12ರಂದು ಸಿಂಗಪುರದಲ್ಲಿ ಟ್ರಂಪ್‌ ಜತೆಗೆ ನಡೆಸಬೇಕಿದ್ದ ಶೃಂಗಸಭೆಯಲ್ಲಿ ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಭಾಗವಹಿಸುವ ತೀರ್ಮಾನದ ಬಗ್ಗೆಮರುಪರಿಶೀಲಿಸುವಂತಾಗಿದೆ’ ಎಂದು ಕಿಮ್‌ ಕೀ ಗ್ವಾನ್ ತಿಳಿಸಿದರು.

ADVERTISEMENT

'ಪರಮಾಣು ಶಸ್ತ್ರಾಸ್ತ್ರ ತ್ಯಜಿಸುವಂತೆ ನಮ್ಮ ಮೇಲೆ ಏಕಪಕ್ಷೀಯವಾಗಿ ಒತ್ತಡಹಾಕಿ, ನಮ್ಮನ್ನು ಮೂಲೆಗುಂಪು ಮಾಡಲು ಅಮರಿಕ ಯತ್ನಿಸಿದರೆ ಆ ರಾಷ್ಟ್ರದ ಜತೆಗೆ ಮಾತುಕತೆ ಮತ್ತು ಸಂಬಂಧ ಹೆಚ್ಚು ಕಾಲ ಮುಂದುವರಿಸಲು ಆಸಕ್ತಿ ತೋರುವುದಿಲ್ಲ. ನಮ್ಮ ರಾಷ್ಟ್ರದ ಆರ್ಥಿಕಾಭಿವೃದ್ಧಿಗೆ ಅಮೆರಿಕದ ಬೆಂಬಲವನ್ನು ನಿರೀಕ್ಷೆ ಮಾಡುವುದಿಲ್ಲ. ಯಾವುದೇ ಆರ್ಥಿಕ ಒಪ್ಪಂದವನ್ನು ಮಾಡಿಕೊಳ್ಳುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ಇತ್ತೀಚೆಗಷ್ಟೇ ಪರ್ಯಾಯ ದ್ವೀಪ ರಾಷ್ಟ್ರಗಳು ಹಗೆತನ ಮರೆತು, ಸ್ನೇಹ ಹಸ್ತ ಚಾಚಿದ್ದವು. ಉಭಯ ರಾಷ್ಟ್ರಗಳ ನಾಯಕರು ಶೃಂಗಸಭೆಯಲ್ಲಿ ಭಾಗಿಯಾಗಿದ್ದರು. ಪರ್ಯಾಯ ದ್ವೀಪ ರಾಷ್ಟ್ರಗಳನ್ನು ಅಣ್ವಸ್ತ್ರ ಮುಕ್ತಗೊಳಿಸುವುದಾಗಿ ಜಂಟಿ ಘೋಷಣೆ ಮಾಡಿದ್ದರು.
*
ಶೃಂಗಸಭೆ ನಡೆಯಬೇಕು: ಚೀನಾ
ಬೀಜಿಂಗ್‌
: ಡೊನಾಲ್ಡ್ ಟ್ರಂಪ್ ಮತ್ತು ಕಿಮ್ ಜಾಂಗ್‌ ಉನ್‌ ನಡುವೆ ನಡೆಯಬೇಕಿರುವ ಶೃಂಗಸಭೆಯನ್ನು ರದ್ದುಪಡಿಸುವುದಾಗಿ ಉತ್ತರ ಕೊರಿಯಾ ಬೆದರಿಕೆ ಹಾಕಿದ ಬೆನ್ನಲ್ಲೇ, ಚೀನಾವು ಶೃಂಗಸಭೆ ನಡೆಸುವ ನಿರ್ಧಾರದಿಂದ ಹಿಂದೆ ಸರಿಯದಂತೆ ಉಭಯ ರಾಷ್ಟ್ರಗಳಿಗೆ ಕರೆ ಕೊಟ್ಟಿದೆ.

ದಕ್ಷಿಣ ಕೊರಿಯಾದ ಸೋಲ್‌ನಲ್ಲಿ ಬುಧವಾರ ನಡೆಯಬೇಕಿದ್ದ ಉನ್ನತ ಮಟ್ಟದ ಮಾತುಕತೆಯನ್ನು ಉತ್ತರ ಕೊರಿಯಾ ರದ್ದುಪಡಿಸಿದ ನಂತರ ಚೀನಾ ಈ ಪ್ರತಿಕ್ರಿಯೆ ನೀಡಿದೆ.

‘ಅಮೆರಿಕ ಮತ್ತು ದಕ್ಷಿಣ ಕೊರಿಯಾ ಜಂಟಿ ಸೇನಾ ಸಮರಭ್ಯಾಸದ ನಂತರ ಪರ್ಯಾಯ ದ್ವೀಪ ರಾಷ್ಟ್ರಗಳಲ್ಲಿ ಪರಿಸ್ಥಿತಿ ಬಿಗಡಾಯಿಸುವಂತೆ ಕಾಣಿಸುತ್ತಿದೆ. ಇದಕ್ಕೆ ಆಸ್ಪದ ಕೊಡದೆ, ಅಮೆರಿಕ ಮತ್ತು ಉತ್ತರ ಕೊರಿಯಾ ರಾಷ್ಟ್ರಗಳ ನಾಯಕರು ಮೌಲ್ಯಯುತ ಮಾತುಕತೆಗೆ ವೇದಿಕೆಯಾದ ಶೃಂಗಸಭೆ ನಡೆಸಬೇಕು’ ಎಂದು ಚೀನಾ ಬಯಸುತ್ತದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಲು ಕಾಂಗ್ ತಿಳಿಸಿದ್ದಾರೆ.
*
ಸಭೆಗೆ ಸಿದ್ಧತೆ: ಶ್ವೇತಭವನ
ವಾಷಿಂಗ್ಟನ್‌: ಜೂನ್ 12 ರಂದು ನಡೆಯಬೇಕಿರುವ ಐತಿಹಾಸಿಕ ಶೃಂಗಸಭೆಯನ್ನು ರದ್ದುಪಡಿಸುವುದಾಗಿ ಉತ್ತರ ಕೊರಿಯಾ ಬೆದರಿಕೆ ಹಾಕಿದ ಹೊರತಾಗಿಯೂ, ಟ್ರಂಪ್ ಮತ್ತು ಕಿಮ್ ಜಾಂಗ್ ಉನ್ ನಡುವಿನ ಮಹತ್ವದ ಭೇಟಿಯ ಈ ಸಭೆಗೆ ಸಕಲ ಸಿದ್ಧತೆಗಳನ್ನು ಮುಂದುವರಿಸಿದ್ದೇವೆ ಎಂದು ಶ್ವೇತಭವನ ಹೇಳಿದೆ.

‘ಸಭೆಯು ನಡೆಯಲಿದೆ ಎಂದು ನಾವು ಭರವಸೆ ಹೊಂದಿದ್ದೇವೆ. ನಾವು ಮಾತುಕತೆ ನಡೆಸುವ ಮಾರ್ಗದಲ್ಲೇ ಮುಂದುವರಿಯುತ್ತೇವೆ. ಸಭೆ ನಡೆದರೆ ಟ್ರಂಪ್‌ ಪಾಲ್ಗೊಳ್ಳಲು ಉತ್ಸುಕರಾಗಿದ್ದಾರೆ’ ಎಂದು ವಕ್ತಾರೆ ಸಾರಾ ಸ್ಯಾಂಡರ್ಸ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.