ಕ್ಯಾನ್ಬೆರಾ (ಎಪಿ): ಎಂಟು ದಿನಗಳಿಂದ ಅಂಟಾರ್ಕ್ಟಿಕಾದ ಹಿಮ ಸಾಗರದ ನಡುವೆ ಸಿಲುಕಿದ್ದ ‘ಎಂವಿ ಅಕಾಡೆಮಿಕ್ ಶೋಕಾಲ್ಸ್ಕಿಯ್’ಹಡಗಿನಲ್ಲಿದ್ದ ವಿಜ್ಞಾನಿಗಳು ಮತ್ತು ಪ್ರಯಾಣಿಕರನ್ನು ಗುರುವಾರ ರಕ್ಷಿಸಲಾಗಿದೆ.
ಶೋಧಯಾತ್ರೆಯ ಹಡಗಿನಲ್ಲಿ ಸಿಲುಕಿದ್ದ ವಿಜ್ಞಾನಿಗಳು ಮತ್ತು ಅವರ ಸಹಾಯಕರು ಸೇರಿ ಒಟ್ಟು 52 ಪ್ರಯಾಣಿಕರನ್ನು ಹೆಲಿಕಾಪ್ಟರ್ ಮೂಲಕ ಆಸ್ಟ್ರೇಲಿಯಾದ ‘ಅರೊರಾ ಆಸ್ಟ್ರಾಲಿಸ್’ ಎಂಬ ವಿಶೇಷ ಹಡಗಿಗೆ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು.
ಸತತ ಐದು ಗಂಟೆಗಳ ಕಾರ್ಯಾಚರಣೆ ಯಶಸ್ವಿಯಾಗಿದ್ದು ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ರಕ್ಷಣಾ ಕಾರ್ಯಾಚರಣೆಯ ತಂಡದ ಮುಖ್ಯಸ್ಥ ಕ್ರಿಸ್ ಟರ್ನಿ ತಿಳಿಸಿದ್ದಾರೆ.
ಒಂದು ಬಾರಿ 12 ಜನರಂತೆ ಎಲ್ಲರನ್ನೂ ಸ್ಥಳಾಂತರಿಸಲಾಗಿದ್ದು, ಎಲ್ಲರೂ ‘ಅರೊರಾ ಆಸ್ಟ್ರಾಲಿಸ್’ ಹಡಗಿನಲ್ಲಿ ಸುರಕ್ಷಿತವಾಗಿದ್ದಾರೆ. ಜನವರಿ 15ರ ವೇಳೆಗೆ ಈ ಎಲ್ಲರೂ ಆಸ್ಟ್ರೇಲಿಯಾ ತಲುಪಲಿದ್ದಾರೆ ಎಂದು ತಿಳಿಸಿದರು.
ಸದ್ಯ‘ಶೋಕಾಲ್ಸ್ಕಿಯ್’ನಲ್ಲಿ ಹಲ ದಿನಗಳಿಗೆ ಸಾಕಾಗುವಷ್ಟು ಆಹಾರ ದಾಸ್ತಾನು ಇದ್ದು ಚಿಂತಿಸುವ ಅಗತ್ಯವಿಲ್ಲ. ಅದು ಮುಳುಗುವ ಯಾವುದೇ ಅಪಾಯ ಇಲ್ಲದ ಕಾರಣ 22 ಸಿಬ್ಬಂದಿ ಹಡಗಿನಲ್ಲಿಯೇ ಉಳಿಯಲು ನಿರ್ಧರಿಸಿದ್ದಾರೆ ಎಂದು ಟರ್ನಿ ತಿಳಿಸಿದರು.
ಆಸ್ಟ್ರೇಲಿಯಾದ ‘ಅರೊರಾ ಆಸ್ಟ್ರಾಲಿಸ್’ ಮತ್ತು ಚೀನಾದ ‘ಸ್ನೋ ಡ್ರ್ಯಾಗನ್’ನ ಹಡಗಿನ ಹೆಲಿಕಾಪ್ಟರ್ಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದವು.
ಭಾರಿ ಹಿಮಗಾಳಿ ಮತ್ತು ದೊಡ್ಡ ಮಂಜುಗಡ್ಡೆ ಹಾಸುಗಳಿಂದಾಗಿ ಈ ಮೊದಲು ಕೈಗೊಂಡಿದ್ದ ಎಲ್ಲ ರಕ್ಷಣಾ ಕಾರ್ಯಾಚರಣೆ ವಿಫಲವಾಗಿದ್ದವು. ಪ್ರತಿಕೂಲ ಹವಾಮಾನದ ನಡುವೆಯೂ ಈ ಬಾರಿಯ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಟರ್ನಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ನಾನಾ ದೇಶಗಳ ವಿಜ್ಞಾನಿಗಳ ಹೊತ್ತ ಶೋಕಾಲ್ಸ್ಕಿಯ್ ಹಡಗು ನವೆಂಬರ್ 28ರಂದು ನ್ಯೂಜಿಲೆಂಡ್ನಿಂದ ಅಂಟಾರ್ಕ್ಟಿಕಾಕ್ಕೆ ಪ್ರಯಾಣ ಬೆಳೆಸಿತ್ತು. ಸಾಗರದ ನೀರು ಹೆಪ್ಪುಗಟ್ಟಿದ ಕಾರಣ ಸಂಚರಿಸಲಾಗದೆ ಹಡಗು ನಡುವೆ ಸಿಲುಕಿಕೊಂಡಿತ್ತು.
ಶೋಕಾಲ್ಸ್ಕಿಯ್ ನೆರವಿಗೆ ಧಾವಿಸಿದ್ದ ಚೀನಾದ ‘ಸ್ನೋ ಡ್ರ್ಯಾಗನ್’ ಮತ್ತು ಆಸ್ಟ್ರೇಲಿಯಾದ ‘ಅರೊರಾ ಆಸ್ಟ್ರಾಲಿಸ್’ ಹಡಗುಗಳು ಕೂಡ ಹಿಮಸಾಗರದಲ್ಲಿ ಸಿಲುಕಿಕೊಂಡಿದ್ದವು.
ನೂರು ವರ್ಷಗಳ ಹಿಂದೆ
(1911–13) ಆಸ್ಟ್ರೇಲಿಯಾದ ಡಗ್ಲಾಸ್ ಮಾವ್ಸನ್ ಎಂಬ ಸಾಹಸಿ ಕೈಗೊಂಡಿದ್ದ ಅಂಟಾರ್ಕ್ಟಿಕಾ ಶೋಧಯಾತ್ರೆಯ ನೆನಪಿಗಾಗಿ ಆಸ್ಟ್ರೇಲಿಯಾ ರಷ್ಯಾದ ಹಡಗನ್ನು ಬಾಡಿಗೆಗೆ ಪಡೆದು ಈ ವಿಶೇಷ ವಿಜ್ಞಾನಯಾತ್ರೆ ಕೈಗೊಂಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.