ವಾಷಿಂಗ್ಟನ್ (ಪಿಟಿಐ): ಅಮೆರಿಕದಲ್ಲಿನ ಎರಡನೇ ಅತಿ ದೊಡ್ಡ ನ್ಯಾಯಾಲಯವಾದ ಇಲ್ಲಿನ ಮೇಲ್ಮನವಿ ಕೋರ್ಟ್‌ನ ನ್ಯಾಯಮೂರ್ತಿಯಾಗಿ ಭಾರತೀಯ ಮೂಲದ ಅಮೆರಿಕ ಪ್ರಜೆ ಶ್ರೀನಿವಾಸನ್ ಅವರು ಮಂಗಳವಾರ ಅಧಿಕಾರ ವಹಿಸಿಕೊಂಡರು.
ಭಾರತದ ಚಂಡೀಗಡದಲ್ಲಿ ಜನಿಸಿದ ಕಾನೂನು ಪರಿಣತರಾದ 46 ವರ್ಷದ ಶ್ರೀನಿವಾಸನ್ ಈ ಕೋರ್ಟ್‌ನ ನ್ಯಾಯಮೂರ್ತಿಯಾಗಿ ನೇಮಕವಾದ ಮೊತ್ತಮೊದಲ ಭಾರತೀಯ ಮೂಲದ ವ್ಯಕ್ತಿಯಾಗಿದ್ದಾರೆ.
ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ನಿರುಪಮಾ ರಾವ್ ಅವರು ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಶ್ರೀನಿವಾಸನ್, `ಇದಕ್ಕೆಲ್ಲ ನೀವೇ (ಭಾರತೀಯ ಮೂಲದ ಅಮೆರಿಕನ್ನರೇ) ಕಾರಣಕರ್ತರು. ನಿಮ್ಮ ಪ್ರೋತ್ಸಾಹ ಮರೆಯಲಾಗದು' ಎಂದು ಕೃತಜ್ಞತೆ ವ್ಯಕ್ತಪಡಿಸಿದರು.
ನಿರುಪಮಾ ರಾವ್ ಮಾತನಾಡಿ, ಅಮೆರಿಕದಲ್ಲಿ ನೆಲೆಸಿರುವ ಲಕ್ಷಾಂತರ ಭಾರತೀಯರ ಸಾಧನೆಯ ಪ್ರತೀಕವೆಂಬಂತೆ ಶ್ರೀನಿವಾಸನ್ ಅವರು ಚಿಕ್ಕ ವಯಸ್ಸಿನಲ್ಲೇ ಅಸಾಧಾರಣ ಸಾಧನೆ ಮಾಡಿದ್ದಾರೆ ಎಂದರು. ಅಮೆರಿಕದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿಯೂ ಭಾರತೀಯ ಮೂಲದವರು ನೇಮಕವಾಗಲಿರುವ ದಿನ ದೂರವಿಲ್ಲ ಅನಿಸುತ್ತಿದೆ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.