ADVERTISEMENT

ಶ್ರೀಮಂತ ಹುಡುಗರಿಗೆ ಗಾಳ- ಇಲ್ಲಿದೆ ಸಲಹೆ!

​ಪ್ರಜಾವಾಣಿ ವಾರ್ತೆ
Published 11 ಜುಲೈ 2012, 19:30 IST
Last Updated 11 ಜುಲೈ 2012, 19:30 IST

ಬೀಜಿಂಗ್ (ಪಿಟಿಐ): ಶ್ರೀಮಂತ ಹುಡುಗರನ್ನು ಆಕರ್ಷಿಸುವುದು ಹೇಗೆ? ಅವರಿಗೆ ಬಲೆ ಬೀಸುವುದು ಹೇಗೆ?
ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಲಕ್ಷಾಧಿಪತಿಯೊಬ್ಬರನ್ನು ವರಿಸಿರುವ ಮಹಿಳೆಯೊಬ್ಬರು ಮದುವೆಯಾಗ ಬಯಸುವ ಮಹಿಳೆಯರಿಗೆ ಈ ವಿಚಾರದ ಬಗ್ಗೆ ಪಾಠ ಮಾಡುತ್ತಿದ್ದಾರೆ!

42 ವರ್ಷದ ಸು ಫೆ ಎಂಬ ಮಹಿಳೆ ಚೆಂಗ್ಡುವಿನಲ್ಲಿ ಈ ತರಗತಿಗಳನ್ನು ನಡೆಸುತ್ತಿದ್ದು, 12ಕ್ಕೂ ಅಧಿಕ ಮಹಿಳೆಯರು  ಅವರಿಂದ ಪಾಠ ಹೇಳಿಸಿಕೊಳ್ಳುತ್ತಿದ್ದಾರೆ. ಪ್ರತಿ ವಿದ್ಯಾರ್ಥಿನಿಗೂ ಅವರು 10,000 ಯುವಾನ್ (ಸುಮಾರು 86,000 ರೂಪಾಯಿ) ಶುಲ್ಕ ವಿಧಿಸಿದ್ದಾರೆ.

ಅಲ್ಲದೇ, ಕೋರ್ಸ್‌ನ ಭಾಗವಾಗಿ ಶ್ರೀಮಂತ ವ್ಯಕ್ತಿಗಳನ್ನು ಭೇಟಿಯಾಗುವ ಅವಕಾಶವನ್ನು ಒದಗಿಸುವ ಭರವಸೆಯನ್ನೂ ಅವರು ನೀಡಿದ್ದಾರೆ.

 ಏಳು ವರ್ಷಗಳ ಹಿಂದೆ ಗುವಾಂಗ್ಡೊಂಗ್ ಪ್ರಾಂತ್ಯದ ಶೆಂಜೆನ್‌ನಲ್ಲಿ ನಡೆಸಿದ್ದ ತರಗತಿಗಳು ಯಶಸ್ವಿಯಾಗಿದ್ದವು. ಆ ಸಂದರ್ಭದಲ್ಲಿ 100ಕ್ಕೂ ಅಧಿಕ ಮಹಿಳೆಯರು ಈ ತರಗತಿಗಳಿಗೆ ಹಾಜರಾಗಿದ್ದರು.
ಶ್ರೀಮಂತ ಹುಡುಗರನ್ನು ಸಂಪರ್ಕಿಸುವುದು ಹೇಗೆ, ಅವರೊಂದಿಗೆ ಡೇಟಿಂಗ್ ಮಾಡುವುದು ಹೇಗೆ, ಯಾವಾಗ ಅವರೊಂದಿಗೆ ಲೈಂಗಿಕ ಸಂಬಂಧ ಆರಂಭಿಸಬೇಕು, ಯಾವಾಗ ಮತ್ತು ಹೇಗೆ ಹುಡುಗರಿಂದ ಉಡುಗೊರೆಗಳನ್ನು ಸ್ವೀಕರಿಸಬೇಕು ಎಂಬ ವಿಷಯಗಳ ಬಗ್ಗೆ ಸು ಫೆ ಪಾಠ ಮಾಡುತ್ತಾರೆ.

`ನೀವು ಶ್ರೀಮಂತ ವ್ಯಕ್ತಿಯನ್ನು ಸಂಪರ್ಕಿಸಬೇಕೆಂದಿದ್ದರೆ, ಮೊದಲು ಆ ವ್ಯಕ್ತಿಯ ಹವ್ಯಾಸ ಮತ್ತು ಆಗಾಗ ಭೇಟಿ ನೀಡುವ ಸ್ಥಳಗಳ ಬಗ್ಗೆ ಮಾಹಿತಿ ಕಲೆ ಹಾಕಬೇಕು. ಬಳಿಕ ಯಾವುದಾದರೂ ಒಂದು ಸ್ಥಳದಲ್ಲಿ ಆ ವ್ಯಕ್ತಿಯನ್ನು ಆಕಸ್ಮಿಕವಾಗಿ ಭೇಟಿಯಾಗುತ್ತಿರುವಂತೆ ಮತ್ತು  ಆ ವ್ಯಕ್ತಿಗಿರುವ  ಹವ್ಯಾಸಗಳೇ ನಿಮಗೂ ಇವೆ ಎಂಬಂತೆ ತೋರಿಸಿಕೊಳ್ಳಬೇಕು~ ಎಂದು ಸು ಫೆ ವಿದ್ಯಾರ್ಥಿಗಳಿಗೆ ವಿವರಿಸುತ್ತಾರೆ.

ಸಂಬಂಧದ ಆರಂಭಿಕ ಹಂತದಲ್ಲಿ ಹುಡುಗಿಯರು ದುಬಾರಿ ವೆಚ್ಚದ ಆಹಾರ ಮತ್ತು ದುಬಾರಿ ಉಡುಗೊರೆಗಳಿಗಾಗಿ ಬೇಡಿಕೆ ಇರಬಾರದು. ಶ್ರೀಮಂತ ಹುಡುಗರು ಶಿಕ್ಷಕಿಯರು, ವೈದ್ಯರು ಮತ್ತು ಸರ್ಕಾರಿ  ನೌಕರಿ ಇರುವ ಮಹಿಳೆಯರನ್ನು ಇಷ್ಟ ಪಡುತ್ತಾರೆ. ಗಗನಸಖಿ, ಪತ್ರಕರ್ತೆ ಮತ್ತು ಅಂಗಡಿ ಮಾಲೀಕತ್ವ ಹೊಂದಿರುವ ಹುಡುಗಿಯರನ್ನು ಇಷ್ಟಪಡುವುದಿಲ್ಲ ಎಂಬ ಸಲಹೆಯನ್ನೂ ಅವರು ವಿದ್ಯಾರ್ಥಿಗಳಿಗೆ ನೀಡುತ್ತಾರೆ.

ಪರಸ್ಪರ ಪರಿಚಯ ಆದ ಒಂದು ವರ್ಷದೊಳಗೆ ಶ್ರೀಮಂತ ವ್ಯಕ್ತಿಯನ್ನು ವಿವಾಹ ಆಗುವುದು ಮುಖ್ಯ. ಸ್ನೇಹ ಬೆಳೆದ ಮೊದಲ 2 ತಿಂಗಳ ಅವಧಿಯಲ್ಲಿ ಸಿರಿವಂತನೊಂದಿಗೆ ಲೈಂಗಿಕ ಸಂಪರ್ಕ ಹೊಂದುವುದು ಜಾಣತನವಲ್ಲ ಎಂಬ ಎಚ್ಚರಿಕೆಯನ್ನೂ ಅವರು ನೀಡುತ್ತಾರೆ.ಸು ಅವರು ನೀಡುತ್ತಿರುವ ತರಬೇತಿಯ ಬಗ್ಗೆ ವಿದ್ಯಾರ್ಥಿಗಳು ತೃಪ್ತಿ ವ್ಯಕ್ತಪಡಿಸಿದ್ದಾರೆ.
 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.