ಜಿನೀವಾ (ಪಿಟಿಐ): ಎಲ್‌ಟಿಟಿಇ ಜತೆಗಿನ ಕಾಳಗದಲ್ಲಿ ಮಾನವ ಹಕ್ಕು ಉಲ್ಲಂಘನೆ, ತಮಿಳರ ಮೇಲೆ ದೌರ್ಜನ್ಯ ಮತ್ತಿತರ ಯುದ್ಧ ಸಂಬಂಧಿ ಅಪರಾಧ ಎಸಗಿದ ಆರೋಪದ ಮೇಲೆ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯಲ್ಲಿ ತೆಗೆದುಕೊಂಡ ಶ್ರೀಲಂಕಾ ವಿರುದ್ಧದ ಖಂಡನಾ ನಿರ್ಣಯವನ್ನು ಗುರುವಾರ ಭಾರತ ಬೆಂಬಲಿಸಿದೆ.
ಭಾರತವು ಸಾಮಾನ್ಯವಾಗಿ ಯಾವುದೇ ದೇಶದ ವಿರುದ್ಧದ ನಿರ್ಣಯವನ್ನು ಬೆಂಬಲಿಸುವುದಿಲ್ಲ. ಆದರೆ ರಾಜಕೀಯ ಪಕ್ಷಗಳ, ಅದರಲ್ಲೂ ವಿಶೇಷವಾಗಿ ಡಿಎಂಕೆ ಒತ್ತಡಕ್ಕೆ ಮಣಿದು ಅದು ತನ್ನ ನಿಲುವನ್ನು ಬದಲಾಯಿಸಿಕೊಳ್ಳಬೇಕಾಯಿತು. ನಿರ್ಣಯವನ್ನು ಬೆಂಬಲಿಸದಿದ್ದರೆ, ಯುಪಿಎಯಲ್ಲಿನ ತನ್ನ ಸಚಿವರನ್ನು ಹಿಂದಕ್ಕೆ ಕರೆಸಿಕೊಳ್ಳುವುದಾಗಿ ಡಿಎಂಕೆ ಬೆದರಿಕೆ ಹಾಕಿತ್ತು.
47 ಸದಸ್ಯರನ್ನೊಳಗೊಂಡ ಮಂಡಳಿಯಲ್ಲಿ ಭಾರತ ಸೇರಿದಂತೆ 24 ದೇಶಗಳು ಅಮೆರಿಕ ಪ್ರಾಯೋಜಕತ್ವದ ಈ ನಿರ್ಣಯದ ಪರ ಮತ ಚಲಾಯಿಸಿದರೆ, ಚೀನಾ, ಪಾಕಿಸ್ತಾನ, ಬಾಂಗ್ಲಾದೇಶ ಸೇರಿದಂತೆ 15 ದೇಶಗಳು ವಿರೋಧಿಸಿವೆ. ಇನ್ನು 8 ರಾಷ್ಟ್ರಗಳು ತಟಸ್ಥ ನಿಲುವು ತಾಳಿವೆ.
ಅಂತರ ರಾಷ್ಟ್ರೀಯ ಮಾನವೀಯ ಕಾನೂನುಗಳ ಉಲ್ಲಂಘನೆ ಹಾಗೂ ಮರುಸಂಧಾನ ಸಮಿತಿ ಶಿಫಾರಸುಗಳ ಜಾರಿಗೆ ಸಂಬಂಧಿಸಿದ ವಿವರಣೆ ನೀಡುವಂತೆ ಲಂಕಾ ಸರ್ಕಾರಕ್ಕೆ ನಿರ್ಣಯದಲ್ಲಿ ತಿಳಿಸಲಾಗಿದೆ. ಖಂಡನಾ ನಿರ್ಣಯದ ಅಗತ್ಯವಿರಲಿಲ್ಲ. ಮರುಸಂಧಾನ ಆಯೋಗ ನೀಡಿರುವ ಶಿಫಾರಸುಗಳ ಜಾರಿಗೆ ಲಂಕಾಗೆ ಕಾಲಾವಕಾಶ ನೀಡಬೇಕಿತ್ತು ಎಂದು ಮಾಲ್ಡೀವ್ಸ್ ಅಭಿಪ್ರಾಯಪಟ್ಟಿದೆ.
ವಾಗ್ದಾಳಿ: ನಿರ್ಣಯವನ್ನು ಬೆಂಬಲಿಸಿರುವುದಕ್ಕೆ ಭಾರತದ ಮೇಲೆ ವಾಗ್ದಾಳಿ ನಡೆಸಿರುವ ಲಂಕಾ ವಿದೇಶಾಂಗ ಸಚಿವ ಜಿ.ಎಲ್.ಪೆರಿಸ್, ` ಇಲ್ಲಿ ನಿರ್ದಿಷ್ಟ ವಿಷಯದ ಮಹತ್ವಕ್ಕಿಂತ ವ್ಯೆಹಾತ್ಮಕ ಮೈತ್ರಿ ಹಾಗೂ ಆಂತರಿಕ ರಾಜಕೀಯ ಒತ್ತಡಕ್ಕೆ ಮಣಿದಿರುವುದು ಅತ್ಯಂತ ಖೇದಕರ ಸಂಗತಿ~ ಎಂದು ಹೇಳಿದ್ದಾರೆ.
`ಸಂಬಂಧಕ್ಕೆ ಧಕ್ಕೆ ಇಲ್ಲ~
ಕೊಲಂಬೊ (ಪಿಟಿಐ): ಖಂಡನಾ ನಿರ್ಣಯದಿಂದ ಭಾರತ ಹಾಗೂ ಅಮೆರಿಕ ಜತೆಗಿನ ತನ್ನ ಸಂಬಂಧಕ್ಕೆ ಯಾವ ಧಕ್ಕೆಯೂ ಆಗುವುದಿಲ್ಲ ಎಂದು ಲಂಕಾ ಗುರುವಾರ ಸ್ಪಷ್ಟಪಡಿಸಿದೆ.
ನಿರ್ಣಯ ಜಾರಿಗೆ ಬೆಂಬಲ
ವಿಶ್ವಸಂಸ್ಥೆ (ಐಎಎನ್‌ಎಸ್): ಇರಾನ್‌ನ ಪರಮಾಣು ಯೋಜನೆಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯ ಜಾರಿಗೆ ಭಾರತ ಬೆಂಬಲ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.