ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನ ಸಂಸತ್ತು ಪ್ರಧಾನಿ ನವಾಜ್ ಷರೀಫ್ ಅವರಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು, ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬಾರದು ಎಂದು ಒತ್ತಡ ಹೇರಿದೆ.
ಮಂಗಳವಾರ ನಡೆದ ಸೆನೆಟ್ ಮತ್ತು ನ್ಯಾಷನಲ್ ಅಸೆಂಬ್ಲಿಯ ಜಂಟಿ ಅಧಿವೇಶನದಲ್ಲಿ ಈ ಕುರಿತ ನಿರ್ಣಯ ಅಂಗೀಕರಿಸಲಾಗಿದೆ.
ಪ್ರಧಾನಿ ಷರೀಫ್ ರಾಜೀನಾಮೆಗೆ ಆಗ್ರಹಿಸಿ ಪಾಕಿಸ್ತಾನ ತೆಹರಿಕ್-ಎ–ಇನ್ಸಾಫ್ (ಪಿಟಿಐ) ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಮತ್ತು ಪಾಕಿಸ್ತಾನ ಅವಾಮಿ ತೆಹರಿಕ್ (ಪಿಎಟಿ) ಪಕ್ಷದ ಮುಖ್ಯಸ್ಥ ತಹಿರುಲ್ ಖಾದ್ರಿ ನೇತೃತ್ವದಲ್ಲಿ ಆಗಸ್ಟ್ 14ರಿಂದ ನಡೆಯುತ್ತಿರುವ ಪ್ರತಿಭಟನೆ, ಹಿಂಸಾಚಾರ, ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಲಾಯಿತು.
ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದು ರಾಜೀನಾಮೆ ನೀಡಬಾರದು ಅಥವಾ ರಜೆ ಮೇಲೆ ತೆರಳಬಾರದು ಎಂದು ಆಗ್ರಹಿಸುವ ನಿರ್ಣಯವನ್ನು ಸಂಸತ್‌ನಲ್ಲಿ ಅಂಗೀಕರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಜಂಟಿ ಅಧಿವೇಶನ ಕರೆದು ಚರ್ಚೆ ನಡೆಸುವ ಪ್ರಸ್ತಾವನೆ ವಿರೋಧ ಪಕ್ಷಗಳಿಂದ ಬಂದಿತ್ತು. ಇದಕ್ಕೆ ಸಹಮತ ವ್ಯಕ್ತಪಡಿಸಿದ ಷರೀಫ್ ಅಧಿವೇಶನ ಕರೆದಿದ್ದಾರೆ. ಸಂಸದರ ಆಸಕ್ತಿ ಗಮನಿಸಿ ಎಷ್ಟು ದಿನ ಅಧಿವೇಶನ ನಡೆಸಬೇಕು ಎಂದು ನಿರ್ಧರಿಸಲಾಗುತ್ತದೆ.
ಬಹುತೇಕ ಪ್ರತಿಪಕ್ಷಗಳು ಷರೀಫ್ ಅವರಿಗೆ ಬೆಂಬಲ ವ್ಯಕ್ತಪಡಿಸಿವೆ. ಚುನಾಯಿತ ಸರ್ಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ನೀಡಬಾರದು. ಈ ವಿಷಯದಲ್ಲಿ ಷರೀಫ್ ಅವರು ತೆಗೆದುಕೊಳ್ಳುವ ನಿರ್ಧಾರಗಳಿಗೆ ಬೆಂಬಲ ಸೂಚಿಸುವುದು ಒಳ್ಳೆಯದು ಎಂಬ ಇಂಗಿತವನ್ನು ಪ್ರತಿಪಕ್ಷಗಳು ವ್ಯಕ್ತಪಡಿಸಿವೆ.
ಷರೀಫ್ ರಾಜೀನಾಮೆಗೆ ಆಗ್ರಹಿಸಿ ಎರಡು ವಾರಗಳಿಂದ ಹೋರಾಟ ನಡೆಯುತ್ತಿದೆ. ಈ ಮಧ್ಯೆ ಪ್ರತಿಪಕ್ಷಗಳು ಒಗ್ಗಟ್ಟು ಪ್ರದರ್ಶಿಸಿದ್ದು, ಇದು ಷರೀಫ್ ಅವರ ಕೈಬಲಪಡಿಸಿದಂತಾಗಿದೆ.
ಪಾಕಿಸ್ತಾನ ವಿರುದ್ಧದ ದಂಗೆ: ಪ್ರತಿಭಟನೆಯು ‘ಪಾಕಿಸ್ತಾನ ವಿರುದ್ಧದ ದಂಗೆ’ ಎಂದು ಪರಿಗಣಿಸಿರುವ ಸರ್ಕಾರ, ಇದನ್ನು ತೀವ್ರವಾಗಿ ಖಂಡಿಸಿದೆ. ಪ್ರಜಾಸತ್ತಾತ್ಮಕ ರೂಪದಲ್ಲಿ ಅಸ್ತಿತ್ವಕ್ಕೆ ಬಂದಿರುವ ಸರ್ಕಾರವನ್ನು ವಾಮಮಾರ್ಗದ ಮೂಲಕ ಉರುಳಿಸಲು ಪ್ರತಿಭಟನಾಕಾರರು ಮುಂದಾಗಿರುವುದು ಸರಿಯಲ್ಲ. ಇದು ಧರಣಿ ಅಥವಾ ಪ್ರತಿಭಟನೆ ಅಲ್ಲ. ಪಾಕಿಸ್ತಾನ ವಿರುದ್ಧದ ದಂಗೆ ಎಂದು ಒಳಾಡಳಿತ ಸಚಿವ ಚೌಧುರಿ ನಿಸಾರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.