ಬೈರೂತ್ (ಎಪಿ): ಯುದ್ಧಪೀಡಿತ ಸಿರಿಯಾದ ಅಲೆಪ್ಪೊ ಪ್ರದೇಶದಲ್ಲಿ ವೈಮಾನಿಕ ದಾಳಿಯಿಂದ ಅವಶೇಷಗಳಡಿ ಸಿಲುಕಿ ಗಾಯಗೊಂಡ ಪುಟ್ಟ ಬಾಲಕನ ದಾರುಣ ದೃಶ್ಯಗಳನ್ನು ಸರ್ಕಾರಿ ವಿರೋಧಿ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದಾರೆ.
ಈ ವಿಡಿಯೊ ದೃಶ್ಯಾವಳಿಯಲ್ಲಿ ದಿಗ್ಭ್ರಮೆಗೊಂಡ ಐದರ ಬಾಲಕ ಆಂಬುಲೆನ್ಸ್‌ನಲ್ಲಿ ಕೇಸರಿ ಬಣ್ಣದ ಕುರ್ಚಿಯಲ್ಲಿ ಕುಳಿತಿದ್ದಾನೆ. ದೂಳು ಮೆತ್ತಿಕೊಂಡು, ರಕ್ತ ಸೋರುತ್ತಿರುವುದು ಕಂಡು ಬರುತ್ತದೆ. ಮುಖದ ಎಡಭಾಗದಲ್ಲಿ ರಕ್ತ ಸೋರುತ್ತಿದ್ದುದನ್ನು ಬಾಲಕ ಕೈಯಿಂದ ಒರೆಸಿಕೊಳ್ಳುತ್ತಿರುವ ದೃಶ್ಯ ಮನ ಕಲಕುವಂತಿದೆ.
ಇದು ಯುದ್ಧದ ಕ್ರೌರ್ಯದಿಂದ ನಲುಗಿರುವ ಉತ್ತರ ನಗರದಲ್ಲಿನ ಸ್ಥಿತಿಯನ್ನು ಬಿಂಬಿಸುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊ ವ್ಯಾಪಕವಾಗಿ ಹರಡಿದೆ. ಈ ಬಾಲಕನನ್ನು ಒಮ್ರಾನ್ ಡ್ಯಾಕ್‌ನೀಸ್ ಎಂದು ಅಲೆಪ್ಪೊದ ವೈದ್ಯರೊಬ್ಬರು ಗುರುತಿಸಿದ್ದಾರೆ.
ತಲೆ ಭಾಗದಲ್ಲಿ ಗಾಯಗೊಂಡಿರುವ ಒಮ್ರಾನ್‌ನನ್ನು ಬುಧವಾರ ರಾತ್ರಿ ಸ್ಥಳೀಯ ‘ಎಂ10’ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವಶೇಷಗಳಡಿ ಸಿಲುಕಿದ್ದ ಈ ಬಾಲಕ ಅಲ್ಲದೆ ಆತನ ತಾಯಿ– ತಂದೆ, ಮೂವರು ಸಹೋದರರನ್ನು ರಕ್ಷಿಸಲಾಗಿದೆ. ಘಟನೆಯಲ್ಲಿ ಮೃತಪಟ್ಟಿರುವ ಎಂಟು ಮಂದಿಯಲ್ಲಿ ಐವರು ಬಾಲಕರು ಸೇರಿದ್ದಾರೆ ಎನ್ನಲಾಗಿದೆ.
ಅಲೆಪ್ಪೊದಲ್ಲಿ ಸರ್ಕಾರಿ ಪಡೆ ಹಾಗೂ ಬಂಡುಕೋರರ ನಡುವೆ ಬುಧವಾರ ಸಂಜೆ ನಡೆದ ದಾಳಿಯಲ್ಲಿ ಬಾಲಕ ಒಮ್ರಾನ್ ನೆಲೆಸಿದ್ದ ಅಪಾರ್ಟ್‌ಮೆಂಟ್ ಭಾಗಶಃ ಹಾನಿಗೊಳಗಾಗಿದೆ.
ಅಲೆಪ್ಪೊದಲ್ಲಿ ಸರ್ಕಾರ ಮತ್ತು ಬಂಡುಕೋರರ ನಡುವಣ ಘರ್ಷಣೆಗಳು ಇತ್ತೀಚೆಗೆ ಹೆಚ್ಚಾಗಿದ್ದು ನೂರಾರು ಮಂದಿಯ ಸಾವಿಗೆ ಕಾರಣವಾಗಿವೆ. ಕಳೆದ ವಾರ ಬಂಡುಕೋರರು ನಗರದ ಪೂರ್ವಭಾಗದಲ್ಲಿ ಮೇಲುಗೈ ಸಾಧಿಸಿದ ಬಳಿಕ ಸರ್ಕಾರಿ ಪಡೆಗಳ ವೈಮಾನಿಕ ದಾಳಿಗಳು ಹೆಚ್ಚಿವೆ. ದಿನದಲ್ಲಿ ಮೂರು ಗಂಟೆ ಯಾವುದೇ ದಾಳಿ ನಡೆಸದಂತೆ ರಷ್ಯಾ ಹೇಳಿದ್ದರೂ ದಾಳಿ ನಿರಂತರವಾಗಿ ನಡೆಯತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.