ADVERTISEMENT

ಸರಬ್ಜಿತ್ ಕ್ಷಮಾದಾನ ಅರ್ಜಿ

​ಪ್ರಜಾವಾಣಿ ವಾರ್ತೆ
Published 29 ಮೇ 2012, 19:30 IST
Last Updated 29 ಮೇ 2012, 19:30 IST

ಇಸ್ಲಾಮಾಬಾದ್ (ಪಿಟಿಐ): 1990ರಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತದ ಪ್ರಜೆ ಸರಬ್ಜಿತ್ ಸಿಂಗ್ ಅವರು ಹೊಸದಾಗಿ ಕ್ಷಮಾದಾನ ಅರ್ಜಿಯನ್ನು ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರಿಗೆ ಕಳುಹಿಸಿದ್ದಾರೆ.

ಪಂಜಾಬ್ ಪ್ರಾಂತ್ಯದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ 14 ಜನರು ಸತ್ತಿದ್ದರು. ಸರಬ್ಜಿತ್ ಅವರನ್ನು ಈ ಪ್ರಕರಣದಲ್ಲಿ ಅಪರಾಧಿ ಎಂದು ಪರಿಗಣಿಸಿದ ಪಾಕಿಸ್ತಾನ ನ್ಯಾಯಾಲಯವು ಮರಣದಂಡನೆ ಶಿಕ್ಷೆಯನ್ನು ವಿಧಿಸಿದೆ. ಈಗ ಐದನೇ ಬಾರಿಗೆ ಸರಬ್ಜಿತ್  ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿದ್ದಾರೆ.

49 ವರ್ಷದ ಸರಬ್ಜಿತ್ ಕಳೆದ 20 ವರ್ಷಗಳಿಂದ ಮರಣದಂಡನೆ ಶಿಕ್ಷೆ ಜಾರಿಯ ಆತಂಕದಲ್ಲಿ ದಿನ ನೂಕುತ್ತಿದ್ದಾರೆ. ಈಗ ಅವರನ್ನು ಕೋಟ್ ಲಖಪತ್ ಜೈಲಿನಲ್ಲಿ ಇಡಲಾಗಿದೆ.

ADVERTISEMENT

ಭಾರತದ ಸುಪ್ರೀಂಕೋರ್ಟ್ ಪಾಕಿಸ್ತಾನದ ಸೂಕ್ಷ್ಮ ರೋಗಾಣು ತಜ್ಞ ಖಲೀಲ್ ಚಿಸ್ತಿ ಬಿಡುಗಡೆ ಮಾಡಿರುವುದಕ್ಕೆ ಪ್ರತಿಯಾಗಿ ಸರಬ್ಜಿತ್ ಅವರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಒಂದು ಲಕ್ಷ ಭಾರತೀಯರು ಸಹಿ ಮಾಡಿದ ಪತ್ರವನ್ನು ಹೊಸ ಕ್ಷಮಾದಾನ ಅರ್ಜಿಗೆ ಲಗತ್ತಿಸಲಾಗಿದೆ. ಕ್ಷಮಾದಾನ ಅರ್ಜಿಯ ಜತೆ ಸ್ವತಃ ಸರಬ್ಜಿತ್ ಅವರು ಎರಡು ಪುಟಗಳ ಪತ್ರವನ್ನು ಜರ್ದಾರಿ ಅವರಿಗೆ ಬರೆದಿದ್ದಾರೆ ಎಂದು ಅವರ ವಕೀಲ ಒವೈಸಿ ಶೇಖ್ ತಿಳಿಸಿದ್ದಾರೆ.

ಅಜ್ಮೇರ್‌ನಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಭಾಗಿ ಎನ್ನಲಾಗಿದ್ದ ಚಿಸ್ತಿ ಅವರನ್ನು ಸುಪ್ರೀಂಕೋರ್ಟ್ ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ ಮತ್ತು ಪಾಕಿಸ್ತಾನದಲ್ಲಿರುವ ಕುಟುಂಬದ ಸದಸ್ಯರನ್ನು ಭೇಟಿ ಮಾಡಲು ಅನುಮತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.