ADVERTISEMENT

ಸರಬ್ಜಿತ್ ಸಿಂಗ್ ಅಲ್ಲ, ಸುರ್ಜೀತ್ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2012, 20:30 IST
Last Updated 26 ಜೂನ್ 2012, 20:30 IST
ಸರಬ್ಜಿತ್ ಸಿಂಗ್ ಅಲ್ಲ,  ಸುರ್ಜೀತ್ ಬಿಡುಗಡೆ
ಸರಬ್ಜಿತ್ ಸಿಂಗ್ ಅಲ್ಲ, ಸುರ್ಜೀತ್ ಬಿಡುಗಡೆ   

ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನವು ಬಿಡುಗಡೆ ಮಾಡುತ್ತಿರುವುದು ಭಾರತೀಯ ಕೈದಿ ಸುರ್ಜೀತ್ ಸಿಂಗ್‌ನನ್ನೇ ಹೊರತು ಮರಣ ದಂಡನೆ ಎದುರಿಸುತ್ತಿರುವ ಸರಬ್ಜಿತ್ ಸಿಂಗ್‌ನನ್ನು ಅಲ್ಲ ಎಂದು ಪಾಕ್ ಅಧ್ಯಕ್ಷರ ವಕ್ತಾರರು ಮಂಗಳವಾರ ಮಧ್ಯರಾತ್ರಿ ಸ್ಪಷ್ಟನೆ ನೀಡಿದ್ದಾರೆ.

ಬಾಂಬ್ ಸ್ಫೋಟಗೊಳಿಸಿದ್ದ ಆರೋಪದ ಮೇಲೆ  ಮರಣ ದಂಡನೆಗೆ ಒಳಗಾಗಿರುವ ಸರಬ್ಜಿತ್ ಸಿಂಗ್‌ಗೆ ಕ್ಷಮಾದಾನ ದೊರೆತಿದ್ದಾಗಿ ವರದಿಗಳು ಬಂದ ಕೆಲವೇ ತಾಸುಗಳಲ್ಲಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿಯವರ ವಕ್ತಾರ ಫರ‌್ಹತ್‌ಉಲ್ಲಾ ಬಾಬರ್ ಇದನ್ನು ಸ್ಪಷ್ಟಪಡಿಸಿದ್ದಾರೆ.

`ಸುರ್ಜೀತ್ ಸಿಂಗ್ ಮೂರು ದಶಕಗಳಿಂದ ಜೈಲಿನಲ್ಲಿದ್ದು, ಆತನ ಬಿಡುಗಡೆಗೆ ಅಧಿಕಾರಿಗಳು ಕ್ರಮ ತೆಗೆದುಕೊಂಡಿದ್ದಾರೆ. ಇದರಲ್ಲಿ ಗೊಂದಲವಾಗಿದೆ ಎಂಬುದು ನನ್ನ ಭಾವನೆ. ಮೊದಲನೆಯದಾಗಿ ಇದು ಕ್ಷಮಾದಾನದ ಪ್ರಕರಣವೇ ಅಲ್ಲ~ ಎಂದು ಅವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಸುರ್ಜೀತ್ ಸಿಂಗ್ ಜೈಲು ಶಿಕ್ಷೆ ಪೂರ್ಣಗೊಳಿಸಿದ್ದು, ಆತನನ್ನು ಬಿಡುಗಡೆ ಮಾಡಿ ಭಾರತಕ್ಕೆ ಕಳಿಸಬೇಕಾಗಿದೆ ಎಂದು ಕಾನೂನು ಸಚಿವ ಫಾರೂಖ್ ತಿಳಿಸಿದ್ದಾಗಿ ಬಾಬರ್ ಹೇಳಿದ್ದಾರೆ.

ಸದ್ಯ ಲಾಹೋರ್‌ನ ಕೋಟ್ ಲಖ್‌ಪತ್ ಜೈಲಿನಲ್ಲಿರುವ ಸುರ್ಜೀತ್, ಸುಮಾರು 30 ವರ್ಷಗಳಿಗಿಂತಲೂ ಹೆಚ್ಚು ಕಾಲ ಪಾಕ್ ಅಧೀನದಲ್ಲಿ ಇದ್ದಾನೆ. ಗೂಢಚಾರಿಕೆ ಆರೋಪದ ಮೇಲೆ ಈತನನ್ನು ಭಾರತ-ಪಾಕ್ ಗಡಿಯಲ್ಲಿ ಸೇನಾಡಳಿತಗಾರ ಜನರಲ್ ಜಿಯಾ ಉಲ್ ಹಕ್  ಅಧ್ಯಕ್ಷರಾಗಿದ್ದಾಗ ಬಂಧಿಸಲಾಗಿತ್ತು.

ಸುರ್ಜೀತ್ ಸಿಂಗ್ ಮರಣ ದಂಡನೆಯನ್ನು 1989ರಲ್ಲಿ ಆಗಿನ ಪ್ರಧಾನಿ ಬೆನಜೀರ್ ಭುಟ್ಟೊ ಅವರ ಸಲಹೆ ಮೇರೆಗೆ ಅಧ್ಯಕ್ಷ ಇಸಾಕ್ ಅವರು ಜೀವಾವಧಿ ಶಿಕ್ಷೆಗೆ ಇಳಿಸಿದ್ದರು. ಸುರ್ಜೀತ್‌ನನ್ನು ಇನ್ನು 3 ತಿಂಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಮೇನಲ್ಲಿ ಪಂಜಾಬ್ ಗೃಹ ಇಲಾಖೆ ಲಾಹೋರ್ ಹೈಕೋರ್ಟ್‌ಗೆ ತಿಳಿಸಿತ್ತು.

ಅಧ್ಯಕ್ಷ ಜರ್ದಾರಿ ಅವರು ಸರಬ್ಜಿತ್ ಸಿಂಗ್‌ಗೆ ವಿಧಿಸಿರುವ ಮರಣ ದಂಡನೆಯನ್ನು ಜೀವಾವಧಿಗೆ ಇಳಿಸಿದ್ದಾರೆ ಮತ್ತು ಆತನ ಬಿಡುಗಡೆಗೆ ನಿರ್ದೇಶನ ನೀಡಿದ್ದಾರೆ ಎಂದು ಈ ಮೊದಲು ಸುದ್ದಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.