ADVERTISEMENT

ಸಹಚರನನ್ನು ಸಮರ್ಥಿಸಿಕೊಂಡ ನೇಪಾಳ

​ಪ್ರಜಾವಾಣಿ ವಾರ್ತೆ
Published 7 ಜೂನ್ 2011, 19:30 IST
Last Updated 7 ಜೂನ್ 2011, 19:30 IST

ಕಠ್ಮಂಡು (ಐಎಎನ್‌ಎಸ್): ಯೋಗ ಗುರು ಬಾಬಾ ರಾಮ್‌ದೇವ್ ಅವರ ಸಹಚರ ಬಾಲಕೃಷ್ಣ ಅವರು ಇಲ್ಲಿ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿ ಆ ನಂತರದಲ್ಲಿ ಭಾರತಕ್ಕೆ ಪಲಾನಯ ಮಾಡಿದ್ದಾರೆ ಎಂದು ಭಾರತದ ರಾಜಕಾರಣಿ ಹೇಳಿರುವುದಾಗಿ ಅಲ್ಲಿನ ಮಾಧ್ಯಮಗಳಲ್ಲಿ ಪ್ರಕಟವಾದ ಬಳಿಕ ನೇಪಾಳದಲ್ಲಿ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಯೋಗಗುರು ನೇಪಾಳದಲ್ಲಿ ಸ್ಥಾಪಿಸಿದ ಪತಂಜಲಿ ಯೋಗ ಸಮಿತಿಯು ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರ ಹೇಳಿಕೆಯನ್ನು ತಳ್ಳಿ ಹಾಕಿದೆ.

ನೇಪಾಳಿ ಪ್ರಜೆ ಬಾಲಕೃಷ್ಣ ಅವರು ನೇಪಾಳದಲ್ಲಿ ಅಪರಾಧ ಚಟುವಟಿಕೆ ನಡೆಸಿದ್ದಕ್ಕಾಗಿ ಪೊಲೀಸರಿಗೆ ಬೇಕಾದವರಾಗಿದ್ದಾರೆ ಮತ್ತು ಮೋಸದಿಂದ ಭಾರತದ ಪಾರ್ಸ್‌ಪೋರ್ಟ್ ಪಡೆದುಕೊಂಡಿದ್ದಾರೆ ಎಂದು ದಿಗ್ವಿಜಯಸಿಂಗ್ ಆರೋಪಿಸಿದ್ದರು.

`ಇದು ಸುಳ್ಳು. ಭಾರತದ ಆಡಳಿತ ಪಕ್ಷದ ರಾಜಕಾರಣಿಗಳು ಸ್ವಯಂ ನಿಯಂತ್ರಣ ಕಳೆದುಕೊಂಡು ಯಾವ ರೀತಿ ವರ್ತಿಸುತ್ತಿದ್ದಾರೆ ಎಂಬುದಕ್ಕೆ ಇದು ನಿದರ್ಶನ~ ಎಂದು ಸಮಿತಿಯ ನೇಪಾಳ ಮುಖ್ಯಸ್ಥ ಲವದೇವ್ ಮಿಶ್ರ ಹೇಳಿದ್ದಾರೆ.

`ಆಚಾರ್ಯ ಬಾಲಕೃಷ್ಣ ಅವರು ಬಾಲ್ಯದಿಂದಲೂ ಭಾರತದಲ್ಲೇ ನೆಲೆಸಿದ್ದಾರೆ. ನೇಪಾಳದಲ್ಲಿ ಅಪರಾಧ ಚಟುವಟಿಕೆಗಳಲ್ಲಿ ಅವರು ಭಾಗಿಯಾಗಿದ್ದರು ಎಂಬುದು ಅಸಂಬದ್ಧ~ ಎಂದಿದ್ದಾರೆ.

ಮೋಸದಿಂದ ಪಾರ್ಸ್‌ಪೋರ್ಟ್ ಪಡೆದುಕೊಂಡಿದ್ದಾರೆ ಎಂಬ ಬಗ್ಗೆ ಸರ್ಕಾರಿ ಸಂಸ್ಥೆಗಳು ಅಧಿಕೃತವಾಗಿ ಹೇಳಿಕೆ ನೀಡಿದ ನಂತರವಷ್ಟೇ ನಂಬ ಬಹುದಾಗಿದೆ. ರಾಜಕಾರಣಿಗಳ ಹೇಳಿಕೆಗಳಿಂದಲ್ಲ ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ.

ನೇಪಾಳಿ ಪ್ರಜೆ ಎಂಬ ಕಾರಣಕ್ಕೇ ಸಾರ್ವಜನಿಕ ವ್ಯಕ್ತಿಯ ಚಾರಿತ್ರ್ಯವಧೆ ಮಾಡುವುದು ರಾಜಕೀಯ ಪ್ರೇರಿತವಾದ ಯತ್ನ ಎಂದು ನೇಪಾಳದ ಜನರು ಭಾವಿಸಿದ್ದಾರೆ. ಇದು ಭಾರತ- ನೇಪಾಳದ ಬಾಂಧವ್ಯದ ನಡುವೆ ಮತ್ತಷ್ಟು ಬಿರುಕು ಮೂಡಿಸುವ ಭೀತಿ ಇದೆ ಎಂದು ವಿಶ್ಲೇಷಣೆಗಳು ಕೇಳಿ ಬಂದಿವೆ.

ನೇಪಾಳಿ ಟಿವಿ ಚಾನೆಲ್‌ವೊಂದು ದಿಗ್ವಿಜಯಸಿಂಗ್ ಅವರ ಆರೋಪವನ್ನು `ದಿನದ ವಿಷಯ~ ಎಂದು ಪರಿಗಣಿಸಿ ಮಂಗಳವಾರ ಕಾರ್ಯಕ್ರಮ ಪ್ರಸಾರ ಮಾಡಿದೆ. ಇದರಲ್ಲಿ ಬಾಲಕೃಷ್ಣ ಅವರನ್ನು ಚಿಕ್ಕ ವಯಸ್ಸಿನಿಂದಲೇ ಬಲ್ಲ ಜನರನ್ನು ಮಾತನಾಡಿಸಿದ್ದು ಇವರೆಲ್ಲರೂ ಬಾಲಕೃಷ್ಣನ ಪರ ವಹಿಸಿಕೊಂಡಿದ್ದಾರೆ.

ಹರಿದ್ವಾರದಲ್ಲಿರುವ ಬಾಲಕೃಷ್ಣ ಅವರ ಸೋದರನೊಂದಿಗೆ ತಾವು ಮಂಗಳವಾರ ಮಾತನಾಡಿರುವುದಾಗಿ ನೇಪಾಳದ ಪತ್ರಕರ್ತ ನಾರಾಯಣ ಭಂಡಾರಿ ತಿಳಿಸಿದ್ದಾರೆ. ಭಾರತದ ಕೆಲವು ಮಾಧ್ಯಮಗಳು ಬಾಲಕೃಷ್ಣ ಪರಾರಿಯಾಗಿದ್ದಾರೆ ಎಂದು ವರದಿ ಮಾಡಿವೆ. ಆದರೆ ಬಾಲಕೃಷ್ಣ ಸುರಕ್ಷಿತವಾಗಿದ್ದಾರೆ ಎಂದು ಅವರು ಹೇಳಿದ್ದಾಗಿ ಭಂಡಾರಿ ತಿಳಿಸಿದ್ದಾರೆ.

ಭಾರತದಲ್ಲಿನ ಪ್ರತಿಭಟನೆಗಳ ಬಗ್ಗೆ ನೇಪಾಳದ ಮಾಧ್ಯಮಗಳು ವರದಿ ಮಾಡುತ್ತಿವೆ. ಓದುಗರು ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲದ ಚೀನಾದೊಂದಿಗೆ ಭಾರತವನ್ನು ಹೋಲಿಕೆ ಮಾಡಿ ಪ್ರಮುಖ ಪತ್ರಿಕೆಗಳಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ನೇಪಾಳದ 75 ಜಿಲ್ಲೆಗಳಲ್ಲಿ ರಾಮದೇವ್ ಅವರ ಯೋಗ ಕೇಂದ್ರಗಳಿದ್ದು ಐದು ಸಾವಿರಕ್ಕೂ ಹೆಚ್ಚು ಶಿಕ್ಷಕರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.