ವಾಷಿಂಗ್ಟನ್ (ಪಿಟಿಐ): ನೀವು ಸಾಕುವ ನಾಯಿಯ ಮೆದುಳಿನಲ್ಲಿ ನಿಮ್ಮ ಕಂಪು ಸುವಾಸನೆಯಂತೆ ವ್ಯಾಪಿಸಿಕೊಂಡಿರುತ್ತದೆ ಎಂದು ಹೊಸ ಅಧ್ಯಯನವೊಂದು ಬೆಳಕು ಚೆಲ್ಲಿದೆ.
ಪರಿಚಿತ ವ್ಯಕ್ತಿಗಳು ತಮ್ಮ ಬಳಿ ಇದ್ದಾಗ ನಾಯಿಗಳ ಮೆದುಳಿನಲ್ಲಿ ಪ್ರತಿಫಲ ಸಂಕೇತ ಪ್ರಬಲವಾಗಿರುತ್ತದೆ. ಆದರೆ ಇತರ ನಾಯಿಗಳ ಜೊತೆಗಿದ್ದಾಗ ಅಥವಾ ಅಪರಿಚಿತ ವ್ಯಕ್ತಿಗಳು ತಮ್ಮ ಬಳಿ ಇದ್ದಾಗ ಇಂತಹ ಸಂಕೇತ ನಾಯಿಗಳ ಮೆದುಳಿನಲ್ಲಿ ಇರುವುದಿಲ್ಲ ಎಂದು ಅಧ್ಯಯನ ಹೇಳಿದೆ.
'ಹೀಗಾಗಿಯೇ ನೀವು ಮನೆಗೆ ಬಂದಾಗ ನಿಮ್ಮನ್ನು ಕಂಡೊಡನೆಯೇ ನಿಮ್ಮ ನಾಯಿ ನಿಮ್ಮತ್ತ ಹಾರುತ್ತದೆ ಮತ್ತು ನಾಲಿಗೆಯಿಂದ ನೆಕ್ಕುತ್ತದೆ' ಎಂದು ಎಮೋರಿ ವಿಶ್ವವಿದ್ಯಾಲಯದ ನರ ಕೇಂದ್ರದ ನಿರ್ದೇಶಕ ಖ್ಯಾತ ಸಂಶೋಧಕ ಗ್ರೆಗೋರಿ ಬೆರ್ನ್ಸ್ ಅಭಿಪ್ರಾಯ ಪಟ್ಟಿದ್ದಾರೆ.
'ಏನಿದ್ದರೂ ನಮ್ಮಪ್ರಯೋಗದಲ್ಲಿ ಕಂಪುದಾನಿಗಳು ಭೌತಿಕವಾಗಿ ಹಾಜರಿರಲಿಲ್ಲ. ನಾಯಿಯ ಮೆದುಳು ದೂರದಲ್ಲಿರುವ ಯಾವುದೋ ಒಂದಕ್ಕೆ ಪ್ರತಿಕ್ರಿಯಿಸಿದೆ ಎಂದು ಇದರ ಅರ್ಥ. ನಾವು ಭೌತಿಕವಾಗಿ ಇಲ್ಲದೇ ಇದ್ದರೂ ನಾಯಿಗಳ ಮೆದುಳಿನಲ್ಲಿ ನಮ್ಮ ಮಾನಸಿಕ ಪ್ರತೀಕ ಇರುತ್ತದೆ ಎಂಬುದನ್ನು ಇದು ತೋರಿಸುತ್ತದೆ' ಎಂದು ಬೆರ್ನ್ಸ್ ನುಡಿದರು.
ಮನುಷ್ಯರು ತಮ್ಮ ಪ್ರೀತಿಪಾತ್ರರ ಕಂಪನ್ನು ಆಘ್ರಾಣಿಸಿದಾದ ಭಾವನಾತ್ಮಕ ಪ್ರತಿಕ್ರಿಯೆ ವ್ಯಕ್ತಿಪಡಿಸುತ್ತಾರೆ. ಇದಕ್ಕೆ ಪ್ರತ್ಯಕ್ಷಾನುಭವದ ಅಗತ್ಯವೇನೂ ಇರುವುದಿಲ್ಲ ಎಂದು ಬೆರ್ನ್ಸ್ ಹೇಳಿದರು.
'ನಮ್ಮ ಪ್ರಯೋಗ ಬಹುಶಃ ಇಂತಹುದೇ ಪ್ರಕ್ರಿಯೆ ನಾಯಿಗಳಲ್ಲೂ ಇರುವುದನ್ನು ತೋರಿಸುತ್ತಿದೆ. ಆದರೆ ನಾಯಿಗಳ ಆಘ್ರಾಣ ಶಕ್ತಿ ಮನುಷ್ಯರಿಗಿಂತ ಹೆಚ್ಚಾಗಿರುವುದರಿಂದ ಅವುಗಳ ಪ್ರತಿಕ್ರಿಯೆ ನಮ್ಮ ಪ್ರತಿಕ್ರಿಯೆಗಳಿಗಿಂತ ಹೆಚ್ಚಿನದಾಗಿರುತ್ತದೆ' ಎಂದು ಬೆರ್ನ್ಸ್ ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.