ADVERTISEMENT

ಸಾಮಾಜಿಕ ತಾಣಗಳಿಂದ ಹಾನಿ: ಅಧ್ಯಯನ

​ಪ್ರಜಾವಾಣಿ ವಾರ್ತೆ
Published 24 ಜನವರಿ 2011, 19:30 IST
Last Updated 24 ಜನವರಿ 2011, 19:30 IST

ಲಂಡನ್(ಪಿಟಿಐ): ‘ಫೇಸ್‌ಬುಕ್’, ‘ಟ್ವಿಟ್ಟರ್’... ಇಂತಹ ‘ಸಾಮಾಜಿಕ ತಾಣಗಳಲ್ಲಿ ನೀವು ತೊಡಗಿಸಿಕೊಂಡಿಲ್ಲ ಅಂದ್ರೆ, ನೀವು ಸೋಷಿಯಲ್ ಅಲ್ಲ ಅಥವಾ ಮಾಡರ್ನ್ ಅಲ್ಲ, ಸ್ನೇಹ ಸಂಬಂಧಗಳಿಗೆ ಬೆಲೆಕೊಡುವವರೇ ಅಲ್ಲ’ ಎಂದು ಹೇಳುವವರೇ ಅಧಿಕ. ಆದರೆ ಈ ಚಿಂತನೆಯನ್ನೇ ತಲೆಕೆಳಗು ಮಾಡುವ ಅಧ್ಯಯನ ವರದಿ ಪ್ರಕಟವಾಗಿದೆ.

ಇಂತಹ ಸಾಮಾಜಿಕ ತಾಣಗಳು (ಕಮ್ಯುನಿಟಿ ವೆಬ್‌ಸೈಟ್ಸ್) ವ್ಯಕ್ತಿಯನ್ನು ಮಾನಸಿಕ ಮತ್ತು ದೈಹಿಕವಾಗಿ  ಅಸ್ವಸ್ಥವಾಗಿಸುತ್ತವೆ.ಅಲ್ಲದೇ ಸಾಮಾಜಿಕವಾಗಿ ವಿಮುಖರನ್ನಾಗಿಸುತ್ತದೆ ಎಂಬುದನ್ನು ಅಧ್ಯಯನ ಬಹಿರಂಗ ಪಡಿಸಿದೆ.‘ಮೆಸಾಚುಸೆಟ್ಸ್ ತಂತ್ರಜ್ಞಾನ ಕೇಂದ್ರ’ದ ಪ್ರೊ. ಶೆರ್ರಿ ಟರ್ಕಲ್ ಅವರು ಈ ಅಧ್ಯಯನ ನಡೆಸಿದ್ದಾರೆ. ಅಧ್ಯಯನದ ಮಾಹಿತಿಗಳನ್ನು ‘ಗುಂಪಿನಲ್ಲಿ ಏಕಾಂಗಿ’(ಅಲೋನ್ ಟುಗೆದರ್) ಕೃತಿಯಲ್ಲಿ ಪ್ರಕಟಿಸಿದ್ದಾರೆ. ಇದರಲ್ಲಿರುವ ಮಹತ್ವದ ಅಂಶಗಳನ್ನು ‘ಡೈಲಿ ಟೆಲಿಗ್ರಾಫ್’ ಬಹಿರಂಗಪಡಿಸಿದೆ.

ಶೆರ್ರಿ ಅವರು ಈ ಮೊದಲು ‘ದಿ ಸೆಕೆಂಡ್ ಸೆಲ್ಫ್  ಅಂಡ್ ಲೈಫ್ ಆನ್ ಸ್ಕ್ರೀನ್’ ಎಂಬ ಗ್ರಂಥ ಪ್ರಕಟಿಸಿ ಅಮೆರಿಕನ್ನರ ಮನಗೆದ್ದಿದ್ದರು. ಈ ಕೃತಿಯಲ್ಲಿ ಕೂಡ ಆಧುನಿಕ ತಂತ್ರಜ್ಞಾನದೊಂದಿಗೆ ಬದಲಾಗುತ್ತಿರುವ ಮನುಷ್ಯನ ಮನೋಭಾವದ ಕುರಿತು ಬೆಳಕು ಚೆಲ್ಲಲಾಗಿತ್ತು. ‘ಹೊಚ್ಚಹೊಸ ತಂತ್ರಜ್ಞಾನದ ಅತಿಯಾದ ಬಳಕೆ ನಮ್ಮ ಬದುಕಿನ ಮೇಲೆ  ಹೆಚ್ಚು ಹಿಡಿತ ಸಾಧಿಸಿ, ಮಾನವೀಯತೆಗೆ ಧಕ್ಕೆ ಉಂಟು ಮಾಡುತ್ತದೆ. ಇದು ಮಾನವೀಯ ಸಂಬಂಧಗಳನ್ನು ನಾಶಪಡಿಸುತ್ತದೆ. ಜತೆಗೆ ಜನರನ್ನು ಏಕಾಂಗಿಗಳನ್ನಾಗಿಸುತ್ತದೆ’ ಎಂದು ಅವರು ಪ್ರತಿಪಾದಿಸಿದ್ದಾರೆ.

 ಪ್ರಭಾವಿ ಹಾಗೂ ಅತಿಶಯದ ತಂತ್ರಜ್ಞಾನ ನಮ್ಮಲ್ಲಿದೆ. ಆದರೆ ಇವುಗಳು ವ್ಯಕ್ತಿಯಲ್ಲಿರುವ ವಿಶೇಷ ಸಾಮರ್ಥ್ಯದ ಕುಸಿತ ಅಥವಾ ನಾಶಕ್ಕೆ ಕಾರಣವಾಗುತ್ತದೆ ಎಂದು ಶೆರ್ರಿ ತಿಳಿಸಿದ್ದಾರೆ. ಸಾಮಾಜಿಕ ತಾಣಗಳಲ್ಲಿ ವಿಹರಿಸುವ ವ್ಯಕ್ತಿ ನೈಜಬದುಕು, ಮಾನವನೊಂದಿಗಿನ ನೇರ ಸಂಬಂಧ, ವಾಸ್ತವ ಪ್ರಪಂಚ, ಸತ್ಯಾಂಶಗಳಿಂದ ವಿಮುಖನಾಗುತ್ತಾನೆ. ಇವುಗಳ ಅನುಕರಣೆಯಂತಿರುವ ಸಮಾಜಿಕ ತಾಣಗಳಲ್ಲಿ ವಿಹರಿಸಿ ಭ್ರಮಾಲೋಕದಲ್ಲೇ ಇರುತ್ತಾನೆ. ಇದು ಮಾನಸಿಕ ಅಸ್ವಸ್ಥತೆ, ಸಂಶಯರೋಗ, ಸಿನಿಕತನ ಇತ್ಯಾದಿ ಅಸ್ವಸ್ಥತೆಗಳಿಗೆ ಕಾರಣವಾಗುತ್ತದೆ ಎಂದು ಅವರು ಹೇಳಿದ್ದಾರೆ.

 ‘ಫೇಸ್‌ಬುಕ್’ನಲ್ಲಿ ಸುಮಾರು 1000ಮಂದಿ ‘ಗೆಳೆಯರ ಮುಂದೆ ಮರಣ ಪತ್ರ ಬರೆದಿಟ್ಟು, ಆತ್ಮಹತ್ಯೆ ಮಾಡಿಕೊಂಡಿದ್ದ ಬ್ರಿಟನ್ ಮೂಲದ ಮಹಿಳೆ ಸಿಮೊನ್ ಬ್ಯಾಕ್ ಪ್ರಕರಣದಲ್ಲಿ ‘ಈಕೆಯ ರಕ್ಷಣೆಗೆ ಯಾರೂ ಮುಂದಾಗಲಿಲ್ಲ, ಅದರ ಬದಲು ಅಣಕಿಸಿದರು ಮೋಜು ಅನುಭವಿಸಿದರು’ ಎಂದು ಶೆರ್ರಿ ದೃಷ್ಟಾಂತ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.