ADVERTISEMENT

ಸಿರಿಯಾ: ಮೃತರ ಸಂಖ್ಯೆ 26ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 19:30 IST
Last Updated 7 ಜನವರಿ 2012, 19:30 IST

ಡಮಾಸ್ಕಸ್:  ಸಿರಿಯಾ ರಾಜಧಾನಿ ಡಮಾಸ್ಕಸ್‌ನಲ್ಲಿ ಶುಕ್ರವಾರ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 26ಕ್ಕೆ ಏರಿದೆ. ಈ ದಾಳಿಯಲ್ಲಿ 60ಕ್ಕೂ ಅಧಿಕ ನಾಗರಿಕರು ಗಾಯಗೊಂಡಿದ್ದಾರೆ.
ಎರಡು ವಾರಗಳ ಅವಧಿಯಲ್ಲಿ ಸಿರಿಯಾ ರಾಜಧಾನಿಯಲ್ಲಿ ನಡೆದ ಎರಡನೇ ಉಗ್ರರ ದಾಳಿ ಇದಾಗಿದೆ.

ಹೆಚ್ಚಿನ ಜನಸಂದಣಿಯಿಂದ ಕೂಡಿದ್ದ  ಐತಿಹಾಸಿಕ  ಮಿದಾನ್ ಚೌಕದಲ್ಲಿ ಶುಕ್ರವಾರ ಸ್ಥಳೀಯ ಕಾಲಮಾನ ಬೆಳಿಗ್ಗೆ 10.55ರ ಸುಮಾರಿಗೆ ಆತ್ಮಾಹುತಿ ಬಾಂಬರ್ ಒಬ್ಬ ಸ್ವಯಂ ಸ್ಫೋಟಿಸಿಕೊಂಡ ಎಂದು ಆಂತರಿಕ ಸಚಿವ ಲಿಯುಟೆನಂಟ್ ಅಲ್-ಶಾರ್ ಹೇಳಿದ್ದಾರೆ.

ಈ ಭಯೋತ್ಪಾದನಾ ದಾಳಿಯ ಹಿಂದೆ ಅಧ್ಯಕ್ಷ ಬಾಷರ್ ಅಲ್-ಅಸಾದ್ ಅವರ ಆಡಳಿತದ ಕೈವಾಡವಿದೆ ಎಂದು ಮುಸ್ಲಿಂ ಬ್ರದರ್‌ಹುಡ್ ಸಂಘಟನೆ ಆರೋಪಿಸಿದೆ. ಡಿಸೆಂಬರ್ 23ರಂದು ಡಮಾಸ್ಕಸ್‌ನಲ್ಲಿ ನಡೆದ ಎರಡು ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 44 ಜನರು ಸಾವನ್ನಪ್ಪಿದ್ದರು.

ಅಮೆರಿಕ ಖಂಡನೆ: ಶುಕ್ರವಾರ ನಡೆದ ಆತ್ಮಾಹುತಿ ಬಾಂಬ್ ದಾಳಿಯನ್ನು ಅಮೆರಿಕ ಖಂಡಿಸಿದೆ.

ಪ್ರವಾಸ ಬೇಡ- ಭಾರತ ಸೂಚನೆ
ನವದೆಹಲಿ (ಪಿಟಿಐ): ಪ್ರಜಾಪ್ರಭುತ್ವ ಸ್ಥಾಪನೆಗಾಗಿ ನಡೆಯುತ್ತಿರುವ ಹೋರಾಟದಿಂದ ಹೊತ್ತಿ ಉರಿಯುತ್ತಿರುವ ಸಿರಿಯಾ ದೇಶಕ್ಕೆ ಅನವಶ್ಯಕವಾಗಿ ಭಾರತೀಯರು ಪ್ರಯಾಣಿಸಬಾರದು ಎಂದು ವಿದೇಶಾಂಗ ವ್ಯವಹಾರ ಸಚಿವಾಲಯ ಸೂಚಿಸಿದೆ.

ಸಿರಿಯಾದ ರಾಜಧಾನಿ ಡಮಾಸ್ಕಸ್ ಸುತ್ತಮುತ್ತ ಸಾವಿರಕ್ಕೂ ಹೆಚ್ಚು ಭಾರತೀಯರು ವಾಸಿಸುತ್ತಿದ್ದಾರೆ. ಕೆಲ ತಿಂಗಳಿನಿಂದ ಸಿರಿಯಾ ಸರ್ವಾಧಿಕಾರಿ ಅಲ್ ಅಸದ್ ಬಷರ್ ಅವರ ವಿರುದ್ಧ ದೇಶದೆಲ್ಲೆಡೆ ನಡೆಯುತ್ತಿರುವ ಹೋರಾಟ ಹಿಂಸೆಗೆ ತಿರುಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೂ ಭಾರತೀಯರು ಪ್ರಯಾಣ ಮುಂದೂಡಬೇಕು ಎಂದು ಸರ್ಕಾರ ತಿಳಿಸಿದೆ.

ಕಳೆದ ಮಾರ್ಚ್‌ನಿಂದ ಪ್ರಭುತ್ವದ ವಿರುದ್ಧ ಇಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಈವರೆಗೆ 5 ಸಾವಿರ ಜನ ಮೃತಪಟ್ಟಿರುವುದಾಗಿ ವಿಶ್ವಸಂಸ್ಥೆ ಅಂದಾಜು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.