ವಿಶ್ವಸಂಸ್ಥೆ (ಎಎಫ್‌ಪಿ/ಐಎಎನ್‌ಎಸ್): ಸಿರಿಯಾದಲ್ಲಿ ನಡೆಯುತ್ತಿರುವ ಹಿಂಸಾಚಾರ ಹಾಗೂ ಆ ದೇಶದ ಸನ್ನಿವೇಶದ ಕುರಿತು ಜಾಗತಿಕ ಸಮುದಾಯ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಸಂಘರ್ಷದ ಕುರಿತು ನಿಗಾ ಇಡಲು ಅಲ್ಲಿಗೆ ತೆರಳಿರುವ ವಿಶ್ವಸಂಸ್ಥೆ ವೀಕ್ಷಕರ ಮೇಲೆಯೇ ಗುಂಡಿನ ದಾಳಿ ನಡೆಯುತ್ತಿರುವ ಕುರಿತು ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಬಾನ್ ಕಿ- ಮೂನ್ ಆತಂಕ ವ್ಯಕ್ತಪಡಿಸಿದ್ದಾರೆ.
ಸಿರಿಯಾ ಸನ್ನಿವೇಶದ ಕುರಿತು ಚರ್ಚಿಸಲು ಶುಕ್ರವಾರ ಕರೆಯಲಾಗಿದ್ದ ಭದ್ರತಾ ಮಂಡಳಿ ಸಭೆಯಲ್ಲಿ ಮೂನ್ ಈ ವಿಚಾರ ತಿಳಿಸಿದ್ದಾರೆ ಎಂದು ರಾಜತಾಂತ್ರಿಕರು ಹೇಳಿದ್ದಾರೆ.ಸಿರಿಯಾದಲ್ಲಿ ಸರ್ಕಾರಿ ಪಡೆಗಳು ಹಾಗೂ ವಿರೋಧಿ ಪಡೆಗಳ ನಡುವಿನ ಸಂಘರ್ಷದ ಬಗ್ಗೆ ನಿಗಾ ಇಡಲು ಕಳುಹಿಸಲಾಗಿರುವ ವಿಶ್ವಸಂಸ್ಥೆಯ ಮೇಲ್ವಿಚಾರಣಾ ನಿಯೋಗದ ಸದಸ್ಯರ ಮೇಲೆ ಶೆಲ್ ದಾಳಿ ನಡೆಸಲಾಗುತ್ತಿದೆ, ಅವರ ಚಲನವಲನಗಳ ಮೇಲೆ ಕಣ್ಣಿಡಲಾಗುತ್ತಿದೆ ಹಾಗೂ ಅವರ ವಾಹನಗಳ ಮೇಲೂ ಗುಂಡಿನ ದಾಳಿ ನಡೆಯುತ್ತಿದೆ ಎಂದು ಬಾನ್ ಆತಂಕ ವ್ಯಕ್ತಪಡಿಸಿದ್ದರು.
ವಿಶ್ವಸಂಸ್ಥೆ ಪ್ರತಿನಿಧಿಗಳು ಈಗ ಇಕ್ಕಟ್ಟಿನಲ್ಲಿ ಸಿಲುಕಿಕೊಂಡಿದ್ದಾರೆ. ಸರ್ಕಾರಿ ಯೋಧರು ಅವರ ಮೇಲೆ ಗುಂಡಿನ ದಾಳಿ ನಡೆಸುತ್ತಿದ್ದಾರೆ. ತಮ್ಮ ದೇಶದಲ್ಲಿ ನಡೆಯುತ್ತಿರುವ ರಕ್ತಪಾತ ತಡೆಯಲು ವಿಫಲರಾಗಿದ್ದಕ್ಕೆ ಸಿರಿಯಾದ ಜನರು ಸಹ ವಿಶ್ವಸಂಸ್ಥೆ ಶಾಂತಿ ಪ್ರತಿನಿಧಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಶಾಂತಿ ಒಪ್ಪಂದ ಜಾರಿಯಾಗಿಲ್ಲ; ಅನ್ನಾನ್: ಈ ಮಧ್ಯೆ, ಸಿರಿಯಾಕ್ಕೆ ವಿಶ್ವಸಂಸ್ಥೆ ಹಾಗೂ ಅರಬ್ ಒಕ್ಕೂಟದ ವಿಶೇಷ ಪ್ರತಿನಿಧಿಯಾಗಿ ನಿಯೋಜನೆಗೊಂಡಿರುವ ಕೋಫಿ ಅನ್ನಾನ್, ತಾವು ಮುಂದಿಟ್ಟಿರುವ ಆರು ಅಂಶಗಳ ಶಾಂತಿ ಯೋಜನೆ ಜಾರಿಗೊಂಡಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಈ ಶಾಂತಿ ಯೋಜನೆಯನ್ನು ಜಾಗತಿಕ ಸಮುದಾಯ ಬೆಂಬಲಿಸಿದ್ದು, ಸಿರಿಯಾ ಸರ್ಕಾರ ಸಹ ಒಪ್ಪಿಕೊಂಡಿತ್ತು. ಜನವಸತಿ ಪ್ರದೇಶದಿಂದ ಸೇನಾ ಪಡೆ ವಾಪಸು, ಸರ್ಕಾರ ಹಾಗೂ ಪ್ರತಿಭಟನಾಕಾರರ ನಡುವೆ ಮಾತುಕತೆ, ಗಾಯಗೊಂಡವರಿಗೆ ಚಿಕಿತ್ಸೆ ಹಾಗೂ ಸಂತ್ರಸ್ತರಿಗೆ ನೆರವು ಒದಗಿಸಲು ಸಂಘರ್ಷಕ್ಕೆ ವಿರಾಮ ಇತ್ಯಾದಿ ಅಂಶಗಳನ್ನು ಈ ಯೋಜನೆ ಒಳಗೊಂಡಿತ್ತು.
ಅಮೆರಿಕ ಖಂಡನೆ: ಸಿರಿಯಾದ ಹುಮಾ ಪ್ರಾಂತ್ಯದಲ್ಲಿ 86 ಜನ ಹತ್ಯೆಯಾಗಿರುವುದಕ್ಕೆ ಅಮೆರಿಕ ಖಂಡನೆ ವ್ಯಕ್ತಪಡಿಸಿದೆ. ಆ ದೇಶದಲ್ಲಿ ಸುಲಭ ರಾಜಕೀಯ ಸ್ಥಿತ್ಯಂತರ ತರುವಲ್ಲಿ ಜಂಟಿ ಯತ್ನ ಮಾಡಬೇಕಿದೆ ಎಂದು ಹೇಳಿದೆ.
ಭಾರತದ ಎಚ್ಚರಿಕೆ: ಆಂತರಿಕ ಸಂಘರ್ಷದಿಂದ ನಲುಗುತ್ತಿರುವ ಸಿರಿಯಾದಲ್ಲಿ ಪರಿಸ್ಥಿತಿ ತಹಬದಿಗೆ ತರಲು ಸೈನ್ಯ ಬಲ ಪ್ರಯೋಗಿಸಿದಲ್ಲಿ ಅದು `ಬೆಂಕಿಗೆ ತುಪ್ಪ ಸುರಿದಂತೆ~ ಆಗುತ್ತದೆ ಎಂದು ಭಾರತ ಎಚ್ಚರಿಸಿದೆ.
ಸೇನಾ ಬಲ ಪ್ರಯೋಗಿಸಲು ಹೊರಟಲ್ಲಿ ಜನಾಂಗೀಯ ಕಲಹಕ್ಕೆ ಅದು ನಾಂದಿ ಮಾಡಿಕೊಡುತ್ತದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ರಾಯಭಾರಿಯಾಗಿರುವ ಹರದೀಪ್ ಸಿಂಗ್ ಪುರಿ ಕಳವಳ ವ್ಯಕ್ತಪಡಿಸಿದ್ದಾರೆ.
ಚೀನಾ ವಿರೋಧ: ಸಿರಿಯಾದಲ್ಲಿ ಬಾಹ್ಯ ಸೇನಾ ಬಲ ಪ್ರಯೋಗಿಸಿ ಸರ್ಕಾರ ಬದಲಿಸುವುದಕ್ಕೆ ಚೀನಾ ವಿರೋಧ ವ್ಯಕ್ತಪಡಿಸಿದೆ. ಭದ್ರತಾ ಮಂಡಳಿ ಸಭೆಯಲ್ಲಿ ವಿಶ್ವಸಂಸ್ಥೆಗೆ ಚೀನಾ ರಾಯಭಾರಿಯಾಗಿರುವ ಲಿ ಬೊಡೊಂಗ್, ಸಿರಿಯಾದಲ್ಲಿ ಸರ್ಕಾರ ಬದಲಾಯಿಸುವುದಕ್ಕೆ ವಿರೋಧ ವ್ಯಕ್ತಪಡಿಸಿ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.