ADVERTISEMENT

ಸುರಕ್ಷತೆ ಕುರಿತು ಎಚ್ಚರವಹಿಸಲು ಭಾರತದಲ್ಲಿರುವ ಪ್ರಜೆಗಳಿಗೆ ಚೀನಾ ಸಲಹೆ

ಏಜೆನ್ಸೀಸ್
Published 8 ಜುಲೈ 2017, 11:24 IST
Last Updated 8 ಜುಲೈ 2017, 11:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೀಜಿಂಗ್: ಭಾರತದಲ್ಲಿರುವ ಚೀನಾ ಪ್ರಜೆಗಳು ತಮ್ಮ ಸುರಕ್ಷತೆ ಬಗ್ಗೆ ಎಚ್ಚರವಹಿಸುವಂತೆ ದೆಹಲಿಯಲ್ಲಿರುವ ಚೀನಾ ರಾಯಭಾರ ಕಚೇರಿ ಸಲಹೆ ನೀಡಿದೆ. ಈ ಬಗ್ಗೆ ರಾಯಭಾರ ಕಚೇರಿಯಲ್ಲಿ ಹಾಗೂ ಕಚೇರಿ ವೆಬ್‌ಸೈಟ್‌ನಲ್ಲಿ ಸಂದೇಶ ಪ್ರಕಟಿಸಲಾಗಿದೆ.

ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಸಂದೇಶ ಪ್ರಕಟಿಸಲು ಕಾರಣವೇನು ಎಂಬುದನ್ನು ಚೀನಾ ರಾಯಭಾರ ಕಚೇರಿ ಅಧಿಕಾರಿಗಳು ಬಹಿರಂಗಪಡಿಸಿಲ್ಲ. ಜಿ20 ಶೃಂಗಸಭೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮಾತುಕತೆ ನಡೆಸಿದ ಸಂದರ್ಭದಲ್ಲೇ ಈ ಸಂದೇಶ ಪ್ರಕಟಿಸಲಾಗಿದೆ. ಸ್ಥಳೀಯ ಭದ್ರತೆ ಮತ್ತು ಪರಿಸ್ಥಿತಿಗಳ ಬಗ್ಗೆ ಗಮನವಹಿಸಿ ಎಚ್ಚರದಿಂದಿರುವಂತೆ ಪ್ರಜೆಗಳಿಗೆ ಚೀನಾ ಸೂಚಿಸಿದೆ.

ಚೀನಾದ ಕಂಪೆನಿಗಳು ದೆಹಲಿ ಮತ್ತು ಇತರ ನಗರಗಳಲ್ಲಿ ಕಚೇರಿಗಳನ್ನು ಹೊಂದಿದ್ದು, ಅವುಗಳಲ್ಲಿ ಚೀನಾ ಪ್ರಜೆಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿ ವರ್ಷ ಸುಮಾರು 2 ಲಕ್ಷ ಚೀನಾ ಪ್ರವಾಸಿಗರು ಭಾರತಕ್ಕೆ ಭೇಟಿ ನೀಡುತ್ತಾರೆ ಎನ್ನಲಾಗಿದೆ.

ADVERTISEMENT

ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಪ್ರಕಾರ, ಭಾರತಕ್ಕೆ ಭೇಟಿ ನೀಡುವ ಚೀನಾ ಪ್ರವಾಸಿಗರ ಸಂಖ್ಯೆ 2003ರಲ್ಲಿ 21,152 ಆಗಿತ್ತು. ಇದು 2013ರ ವೇಳೆಗೆ 2 ಲಕ್ಷ ದಾಟಿದೆ.

ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ: ಜೂನ್ 16ರಂದು ಚೀನಾ ಯೋಧರು ಭೂತಾನ್ ಸಮೀಪದ ಡೊಕ್‌ಲಾಂ ಗಡಿ ಪ್ರದೇಶದಲ್ಲಿ ಅತಿಕ್ರಮಣ ಮಾಡಿದ್ದಲ್ಲದೆ, ರಸ್ತೆ ನಿರ್ಮಿಸಲು ಆರಂಭಿಸಿದ್ದರು. ಇದಕ್ಕೆ ಪ್ರತಿಯಾಗಿ, ಭೂತಾನ್ ‍ಪರವಾಗಿ ಭಾರತವು ತನ್ನ ಸೇನೆಯನ್ನು ಅಲ್ಲಿಗೆ ಕಳುಹಿಸಿಕೊಟ್ಟಿತ್ತು. ಇದರಿಂದ ಅಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.