ADVERTISEMENT

ಸೂಟ್‌ಕೇಸ್‌ನಲ್ಲಿ ಖದೀಮರು!

​ಪ್ರಜಾವಾಣಿ ವಾರ್ತೆ
Published 8 ಜೂನ್ 2011, 19:30 IST
Last Updated 8 ಜೂನ್ 2011, 19:30 IST

ಬಾರ್ಸಿಲೋನಾ (ಎಎಫ್‌ಪಿ): ಬ್ಯಾಗ್‌ಗಳಿಂದ ವಸ್ತುಗಳನ್ನು ಕದಿಯುವ ಸಲುವಾಗಿ ದೊಡ್ಡ ಸೂಟ್‌ಕೇಸ್‌ನಲ್ಲಿ ಅಡಗಿ ಕುಳಿತಿದ್ದ ಇಬ್ಬರು ಕಳ್ಳರು ಈಗ ಪೊಲೀಸರ ಅಥಿತಿಗಳಾಗಿದ್ದಾರೆ.

ಸ್ಪೇನ್‌ನ ವಿಮಾನ ನಿಲ್ದಾಣದಿಂದ ಹೊರಡುವ ಬಸ್‌ವೊಂದರಲ್ಲಿದ್ದ (ಸಾಮಾನು- ಸರಂಜಾಮು ಇರಿಸಲು ಪ್ರತ್ಯೇಕ ಸ್ಥಳ ಈ ಬಸ್‌ಗಳಲ್ಲಿರುತ್ತವೆ) ದೊಡ್ಡ ಸೂಟ್‌ಕೇಸ್‌ಗಳಲ್ಲಿ ಅಡಗಿದ್ದ ಈ ಖದೀಮರು ಇತರ ಬ್ಯಾಗ್‌ಗಳಿಂದ ವಸ್ತುಗಳನ್ನು ಕದಿಯುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಗಿರೋನಾ ವಿಮಾನ ನಿಲ್ದಾಣದಿಂದ ಬಾರ್ಸಿಲೋನಾಕ್ಕೆ ಸಂಚರಿಸುವ ಬಸ್‌ನಲ್ಲಿ ಸಭ್ಯ ನಾಗರಿಕರಂತೆ ಟಿಕೆಟ್ ಕೊಂಡು ಕುಳಿತ ಠಕ್ಕರು, ಅದ್ಯಾವ ಮಾಯದಲ್ಲೋ ದೊಡ್ಡ ಸೂಟ್‌ಕೇಸ್‌ನೊಳಗೆ ಹೊಕ್ಕಿಬಿಟ್ಟಿದ್ದರು. ಬಸ್ ಸಂಚಾರ ಆರಂಭಿಸುತ್ತಿದ್ದಂತೆ ಸೂಟ್‌ಕೇಸ್‌ನಿಂದ ಹೊರಬಂದು ಇತರ ಬ್ಯಾಗ್‌ಗಳಲ್ಲಿದ್ದ ವಸ್ತುಗಳನ್ನು ಕದ್ದು ತಾವು ತಂದಿದ್ದ ಚಿಕ್ಕದೊಂದು ಬ್ಯಾಗ್‌ಗೆ ಸೇರಿಸಿಬಿಡುತ್ತಿದ್ದರು. ನಂತರ ಸಭ್ಯ ಪ್ರಯಾಣಿಕರಂತೆ ಇಳಿದು ಹೋಗುತ್ತಿದ್ದರು.

ಬ್ಯಾಗ್‌ಗಳಿಂದ ವಸ್ತುಗಳು ಕಣ್ಮರೆಯಾಗುತ್ತಿರುವ ಬಗ್ಗೆ ಪದೇ ಪದೇ ದೂರು ಬರುತ್ತಿದ್ದ ಕಾರಣ ಪೊಲೀಸರು ಬಸ್‌ನಲ್ಲಿದ್ದ ಒಂದು ದೊಡ್ಡ ಸೂಟ್‌ಕೇಸ್‌ವೊಂದನ್ನು ತೆರೆದಾಗ ಅದರಲ್ಲಿ ಮುದುರಿಕೊಂಡು ಕುಳಿತ್ತಿದ್ದ ಒಬ್ಬ ಕಳ್ಳ ಸಿಕ್ಕಿಬಿದ್ದ. ನಂತರ ಇನ್ನೊಬ್ಬನನ್ನು ಹಿಡಿಯಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.