ADVERTISEMENT

ಸೋನಿಯಾ ಗಾಂಧಿಗೆ ಅಮೆರಿಕ ನ್ಯಾಯಾಲಯ ಸಮನ್ಸ್ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2013, 11:30 IST
Last Updated 11 ಸೆಪ್ಟೆಂಬರ್ 2013, 11:30 IST

ನ್ಯೂಯಾರ್ಕ್ (ಪಿಟಿಐ):  'ನ್ಯಾಯಕ್ಕಾಗಿ ಸಿಕ್ಖರು'  (ಸಿಖ್ಸ್ ಫಾರ್ ಜಸ್ಟೀಸ್ -ಎಸ್ ಎಫ್ ಜೆ) ಸಿಖ್ ಹಕ್ಕುಗಳ ಸಮೂಹವು ಅಮೆರಿಕದ ಫೆಡರಲ್ ನ್ಯಾಯಾಲಯ ಹೊರಡಿಸಿದ್ದ ಸಮನ್ಸ್ ನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಅವರು ದಾಖಲಾಗಿದ್ದರೆಂದು ನಂಬಲಾದ ಆಸ್ಪತ್ರೆಯಲ್ಲಿ ತಲುಪಿಸಿದೆ. ಈ ಮಧ್ಯೆ ಸೋನಿಯಾ ಗಾಂಧಿ ಅವರು ಬುಧವಾರ ಭಾರತಕ್ಕೆ ವಾಪಸಾಗಿದ್ದಾರೆ.

1984ರ ದೆಹಲಿ ಸಿಖ್ ವಿರೋಧಿ ದಂಗೆಯಲ್ಲಿ ಷಾಮೀಲಾಗಿದ್ದ ಪಕ್ಷ ನಾಯಕರಿಗೆ 'ರಕ್ಷಣೆ ನೀಡುತ್ತಿದ್ದಾರೆ' ಎಂಬ  ಆರೋಪದ ಹಿನ್ನೆಲೆಯಲ್ಲಿ ಫೆಡರಲ್ ನ್ಯಾಯಾಧೀಶ ಬ್ರೈನ್ ಎಂ.ಕೊಗನ್ ಅವರು ಸೋನಿಯಾ ಗಾಂಧಿ ಅವರಿಗೆ ಸಮನ್ಸ್ ಜಾರಿ ಮಾಡಿದ್ದರು.

ಸೋನಿಯಾ ಗಾಂಧಿ ಅವರಿಗೆ ನೀಡುವಂತೆ ನ್ಯಾಯಾಧೀಶ ಕೊಗನ್ ಅವರು ನೀಡಿದ್ದ ನಿರ್ದೇಶನದಂತೆ ಸ್ಲೋವನ್- ಕೆಟ್ಟರಿಂಗ್ ಮೆಮೋರಿಯಲ್ ಆಸ್ಪತ್ರೆಯ ರಾತ್ರಿ ಪಾಳಿಯ ನರ್ಸಿಂಗ್ ಸೂಪರ್ ವೈಸರ್ ಸಮನ್ಸ್ ಮತ್ತು ದೂರಿನ ಪ್ರತಿಯನ್ನು ಹಸ್ತಾಂತರಿಸಿದರು.

ಈ ಮಧ್ಯೆ ಮಾಮೂಲಿ ವೈದ್ಯಕೀಯ ತಪಾಸಣೆ ಸಲುವಾಗಿ ಅಮೆರಿಕಕ್ಕೆ ತೆರಳಿದ್ದ ಸೋನಿಯಾ ಅವರು ಬುಧವಾರ ಬೆಳಗ್ಗೆ ದೆಹಲಿಗೆ ಹಿಂತಿರುಗಿದರು.

ಏಲಿಯನ್ ಟೋರ್ಟ್ ಕ್ಲೇಮ್ಸ್ ಕಾಯ್ದೆ (ಎಟಿಸಿಎ) ಮತ್ತು ಚಿತ್ರಹಿಂಸೆ ಬಲಿಪಶು ರಕ್ಷಣಾ ಕಾಯ್ದೆ (ಟಿವಿಪಿಎ) ಅಡಿಯಲ್ಲಿ ಅಮೆರಿಕದ ಮಾನವ ಹಕ್ಕುಗಳ ಸಂಘಟನೆಯಾದ 'ನ್ಯಾಯಕ್ಕಾಗಿ ಸಿಕ್ಖರು' ಗುಂಪು 1984ರ ದಂಗೆ ಸಂತ್ರಸ್ಥರ ಜೊತೆಗೂಡಿ ಸೋನಿಯಾ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT