ADVERTISEMENT

ಸ್ಪೆಲ್ಲಿಂಗ್‌ ಬೀ ವಿಜೇತೆ ಅನನ್ಯಾ ವಿನಯ್‌ ಅವರನ್ನು ಅವಮಾನಿಸಿದ ಅಮೆರಿಕದ ಸುದ್ದಿವಾಹಿನಿ

​ಪ್ರಜಾವಾಣಿ ವಾರ್ತೆ
Published 5 ಜೂನ್ 2017, 17:26 IST
Last Updated 5 ಜೂನ್ 2017, 17:26 IST
ಸ್ಪೆಲ್ಲಿಂಗ್‌ ಬೀ ವಿಜೇತೆ ಅನನ್ಯಾ ವಿನಯ್‌ ಅವರನ್ನು ಅವಮಾನಿಸಿದ ಅಮೆರಿಕದ ಸುದ್ದಿವಾಹಿನಿ
ಸ್ಪೆಲ್ಲಿಂಗ್‌ ಬೀ ವಿಜೇತೆ ಅನನ್ಯಾ ವಿನಯ್‌ ಅವರನ್ನು ಅವಮಾನಿಸಿದ ಅಮೆರಿಕದ ಸುದ್ದಿವಾಹಿನಿ   

ವಾಷಿಂಗ್ಟನ್‌:  ಪ್ರತಿಷ್ಠಿತ ಸ್ಪೆಲ್ಲಿಂಗ್‌ ಬೀ ಸ್ಪರ್ಧೆಯಲ್ಲಿ ವಿಜೇತರಾದ ಭಾರತ ಮೂಲದ ವಿದ್ಯಾರ್ಥಿನಿ ಅನನ್ಯಾ ವಿನಯ್‌ ಅವರನ್ನು ಅಮೆರಿಕದ ಸಿಎನ್‌ಎನ್‌ ಸುದ್ದಿ  ವಾಹಿನಿ ಅಸಂಬದ್ಧ ಪದವೊಂದರ ಅರ್ಥವನ್ನು ಕೇಳಿ ಅವಮಾನಿಸಿರುವುದಕ್ಕೆ  ಸಾಮಾಜಿಕ ಜಾಲತಾಣಗಳಲ್ಲಿ ಆ ವಾಹಿನಿ ವಿರುದ್ಧ ಟೀಕೆ ವ್ಯಕ್ತವಾಗಿದೆ.

ಈ ವರ್ಷದ ಪ್ರತಿಷ್ಠಿತ ಸ್ಪೆಲ್ಲಿಂಗ್‌ ಬೀ ಸ್ಪರ್ಧೆಯಲ್ಲಿ ಅನನ್ಯಾ ವಿಜೇತರಾಗಿದ್ದಾರೆ. ಇವರ ಸಂದರ್ಶನ ನಡೆಸಿದ ಸಿಎನ್‌ಎನ್‌ ಸುದ್ದಿ ವಾಹಿನಿಯ ನಿರೂಪಕರು ಕೊಫೆಫೆ  (covfefe)ಎಂಬ ಪದದ ಅರ್ಥವನ್ನು ಕೇಳಿ ಜನಾಂಗೀಯ ನಿಂದನೆ ಮಾಡಿದ್ದಾರೆ ಎಂದು ಟ್ವೀಟಿಗರು ಆರೋಪಿಸಿದ್ದಾರೆ.

ಅಮೆರಿಕದ ಸುದ್ದಿ ವಾಹಿನಿಗಳು ಅಪ್ರಯೋಜಕವಾದವು ಎಂಬುದನ್ನು ಹೇಳುವ ಸಲುವಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌  ಟ್ರಂಪ್‌ ಅವರು ಕೊಫೆಫೆ ಎಂಬ ಪದವನ್ನು ಬಳಸಿದ್ದರು. ನಂತರದ ದಿನಗಳಲ್ಲಿ ಈ ಪದ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ADVERTISEMENT

ಅನನ್ಯಾ, ಕೊಫೆಫೆ ಪದಕ್ಕೆ ಉತ್ತರ ನೀಡದಿದ್ದಾಗ ‘ ಇದು ಒಂದು ಅಸಂಬದ್ಧ ಪದ,  ನಿನ್ನ ಮೂಲ ಭಾಷೆಯಲ್ಲಿ ಈ ಪದದ ಬಗ್ಗೆ ತಿಳಿದಿದ್ದರೆ ಮಾತ್ರ ನೀನು ಉತ್ತರಿಸಲು ಸಾಧ್ಯ’ ಎಂದು ನಿರೂಪಕರು  ವಿವರಣೆ ನೀಡಿದ್ದಾರೆ.

ಸಿಎನ್‌ಎನ್‌ ಸುದ್ದಿ ವಾಹಿನಿಯ ಆ ನಿರೂಪಕರ ನಡೆ ಬಗ್ಗೆ ಟ್ವಿಟ್ಟರ್‌, ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗಿದೆ.
ಕೆಲವು ದಿನಗಳ ಹಿಂದಷ್ಟೆ ಎನ್‌ಬಿಸಿ ಸುದ್ದಿವಾಹಿನಿಯ ವರದಿಗಾರ್ತಿಯೊಬ್ಬರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ' ನೀವು ಟ್ವಿಟರ್‌ನಲ್ಲಿ ಇದ್ದೀರಾ' ಎಂದು ಪ್ರಶ್ನೆ ಮಾಡುವ ಮೂಲಕ ಟೀಕೆಗೆ ಗುರಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.