ADVERTISEMENT

ಹದಿಹರೆಯದಲ್ಲೇ ತಾಯ್ತನ:ಮೆಕ್ಸಿಕೊ ಮುಂದು

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2012, 19:30 IST
Last Updated 8 ಏಪ್ರಿಲ್ 2012, 19:30 IST

ಮೆಕ್ಸಿಕೊ ಸಿಟಿ (ಐಎಎನ್‌ಎಸ್): ಮಧ್ಯ ಅಮೆರಿಕಾದ ಮೆಕ್ಸಿಕೊದಲ್ಲಿ ಹದಿಹರೆಯದ ತಾಯಂದಿರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆಯಂತೆ.

ಅಲ್ಲಿನ ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಅಂಕಿಅಂಶಗಳಿಂದ ಈ ಅಂಶ ಬಹಿರಂಗಗೊಂಡಿದೆ. ಆ ದೇಶದಲ್ಲಿ ಪ್ರತಿವರ್ಷ 20 ಲಕ್ಷ ಮಕ್ಕಳು ಹುಟ್ಟುತ್ತವಂತೆ. ಅವುಗಳಲ್ಲಿ 4.80 ಲಕ್ಷ ಮಕ್ಕಳು ಅಂದರೆ ಶೇ 24ರಷ್ಟು 14ರಿಂದ 19ರ ವಯೋಮಿತಿಯಲ್ಲಿರುವ ಹದಿಹರೆಯದ ತಾಯಂದಿರಿಗೆ ಜನಿಸುತ್ತವಂತೆ.

ಹದಿಹರೆಯದಲ್ಲೇ ಗರ್ಭಿಣಿಯಾಗುವುದು ತಾಯಿ ಮರಣಕ್ಕೆ ಕಾರಣವಾಗುತ್ತದೆ. ಅವರ ದೇಹ ಪೂರ್ಣ ಬೆಳೆದಿರುವುದಿಲ್ಲ. ಅಲ್ಲದೇ ನವಜಾತ ಶಿಶುಗಳ ಆರೋಗ್ಯಕ್ಕೂ ಇದು ಮಾರಕ. ಏಕೆಂದರೆ ಅಂತಹ ಶಿಶುಗಳ ತೂಕ ಕಡಿಮೆಯಿರುತ್ತದೆ. ಶಿಶುಗಳಲ್ಲಿ ಶ್ವಾಸಕೋಶ ಬೆಳೆದಿರುವುದಿಲ್ಲ ಎಂದು ರಾಷ್ಟ್ರೀಯ ಸಮಾನತೆ ಹಾಗೂ ಸಂತಾನೋತ್ಪತಿ ಕೇಂದ್ರದ ಉಪ ನಿರ್ದೇಶಕ ಅಲೆಜಾಂಡ್ರೊ ರೋಸಾಸ್ ಸಾಲಿಸ್ ಕಳವಳ ವ್ಯಕ್ತಪಡಿಸಿದ್ದಾರೆ.

ಹದಿಹರೆಯದಲ್ಲೇ ತಾಯಿಯಾಗುವುದರಿಂದ ಅಂತಹ ಯುವತಿಯರು ಅರ್ಧಕ್ಕೆ ಓದು ನಿಲ್ಲಿಸುತ್ತಾರೆ. ಭವಿಷ್ಯದಲ್ಲಿ ಅವರಿಗೆ ಉದ್ಯೋಗಾವಕಾಶಗಳು ಕಡಿಮೆಯಾಗುತ್ತವೆ. ಹದಿಹರೆಯದ ಗರ್ಭಧಾರಣೆಯಲ್ಲಿ ಶೇ 60ರಷ್ಟು ಯಾವುದೇ ಗರ್ಭನಿರೋಧಕ ಬಳಸದೇ ಇರುವುದರಿಂದ ಸಂಭವಿಸುತ್ತವೆ. ಇದು ಎಚ್‌ಐವಿ/ಏಡ್ಸ್‌ನಂತಹ ಸೋಂಕಿಗೂ ಕಾರಣವಾಗಿರುವುದರಿಂದ ಈ ಬಗ್ಗೆ  ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.