ಇಸ್ಲಾಮಾಬಾದ್ (ಪಿಟಿಐ): ಜಮಾತ್-ಉದ್-ದುವಾ ಮುಖ್ಯಸ್ಥ ಹಫೀಜ್ ಸಯೀದ್ ಭಯೋತ್ಪಾದನೆಯಲ್ಲಿ ತೊಡಗಿಕೊಂಡಿದ್ದಾನೆ ಎಂಬುದಕ್ಕೆ ಅಮೆರಿಕದ ಬಳಿಯೂ ಸಾಕ್ಷ್ಯಾಧಾರಗಳಿಲ್ಲ. ಸಾಕ್ಷ್ಯಗಳಿಲ್ಲದೇ ಆತನ ವಿರುದ್ಧ ಕ್ರಮ ಕೈಗೊಳ್ಳುವಂತಿಲ್ಲ ಎಂದು ಪಾಕಿಸ್ತಾನ ಹೇಳಿದೆ.
`ಅಮೆರಿಕದ ವಿದೇಶಾಂಗ ಇಲಾಖೆ ಹಫೀಜ್ ಮತ್ತು ಆತನ ಸಹಾಯಕ ಅಬ್ದುಲ್ ರಹಮಾನ್ ಮಕ್ಕಿ ವಿರುದ್ಧ ಸಾಕ್ಷ್ಯ ಮತ್ತು ಮಾಹಿತಿಗಾಗಿ ಲಕ್ಷಗಟ್ಟಳೇ ಡಾಲರ್ ಬಹುಮಾನ ಘೋಷಿಸಿರುವುದು ಅಚ್ಚರಿ ತಂದಿದೆ. ಬುಧವಾರ ಅಮೆರಿಕ ನೀಡಿರುವ ಸ್ಪಷ್ಟನೆಯಿಂದಾಗಿ ಆ ದೇಶದ ಬಳಿ ಈ ಇಬ್ಬರ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ ಎಂಬುದೂ ಸಾಬೀತಾಗಿದೆ~ ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆ ವಕ್ತಾರ ಅಬ್ದುಲ್ ಬಾಸಿತ್ ಹೇಳಿದ್ದಾರೆ.
`ನಮ್ಮ ನಿಲುವು ನಾವು ಸ್ಪಷ್ಟಪಡಿಸಿದ್ದೇವೆ. ಹಫೀಜ್ ವಿರುದ್ಧ ಕಾನೂನು ಪ್ರಕ್ರಿಯೆ ಆರಂಭಿಸಬೇಕಾದರೆ ಬಲವಾದ ಸಾಕ್ಷ್ಯ ಇರಬೇಕು. ಅದಿಲ್ಲದೇ ನಾವು ಏನೂ ಮಾಡುವಂತಿಲ್ಲ~ ಎಂದು ಪತ್ರಿಕಾಗೋಷ್ಠಿಯಲ್ಲಿ ಬಾಸಿತ್ ತಿಳಿಸಿದರು.
ಈ ಇಬ್ಬರ ವಿರುದ್ಧ ಸಾಕ್ಷ್ಯ ಒದಗಿಸುವಂತೆ ಪಾಕಿಸ್ತಾನ ಬುಧವಾರ ಅಮೆರಿಕವನ್ನು ಕೇಳಿತ್ತು. ಅಮೆರಿಕ ನಮ್ಮ ನ್ಯಾಯಾಂಗ ವ್ಯವಸ್ಥೆಯನ್ನು ಗೌರವಿಸುತ್ತದೆ ಎಂಬ ನಂಬಿಕೆ ನಮಗಿದೆ. ಉಭಯ ದೇಶಗಳು ತಮ್ಮ ಮಿತಿಯನ್ನು ಅರಿತಿರಬೇಕು. ಅಂತರರಾಷ್ಟ್ರೀಯ ಕಾನೂನಿನ ಅಡಿ ಈ ರೀತಿ ಬಹುಮಾನ ಘೋಷಿಸಲು ಅವಕಾಶವಿದೆಯೇ ಎಂಬುದು ತಮಗೆ ತಿಳಿದಿಲ್ಲ ಎಂದರು.
ಬಹುಮಾನ: ಅಮೆರಿಕ ಸ್ಪಷ್ಟನೆ (ವಾಷಿಂಗ್ಟನ್ ವರದಿ): ಹಫೀಜ್ ಸಯೀದ್ ತಲೆಗೆ ಒಂದು ಕೋಟಿ ಡಾಲರ್ ಬಹುಮಾನ ಘೋಷಿಸಿರುವ ಸಂಬಂಧ ಅಮೆರಿಕ ಮತ್ತಷ್ಟು ಸ್ಪಷ್ಟನೆ ನೀಡಿದ್ದು, ಈ ಬಹುಮಾನ ಆತ ಎಲ್ಲಿದ್ದಾನೆ ಎಂದು ಪತ್ತೆ ಹಚ್ಚಲು ಅಲ್ಲ. ಆತನನ್ನು ಬಂಧಿಸಿ, ಶಿಕ್ಷೆಗೆ ಒಳಪಡಿಸುವ ಸಾಕ್ಷ್ಯ ಕಲೆಹಾಕಲು ಬಹುಮಾನ ಘೋಷಿಸಲಾಗಿದೆ ಎಂದು ತಿಳಿಸಿದೆ.
`ಆತ ಎಲ್ಲಿದ್ದಾನೆ ಎಂಬುದು ಎಲ್ಲರಿಗೂ ಗೊತ್ತು. ಪಾಕಿಸ್ತಾನದ ಪ್ರತಿ ಪತ್ರಕರ್ತನಿಗೆ ಆತನ ಸುಳಿವು ಇದೆ. ಆತನನ್ನು ಕೋರ್ಟ್‌ನಲ್ಲಿ ಶಿಕ್ಷೆಗೆ ಗುರಿಪಡಿಸುವಂತಹ ಸಾಕ್ಷ್ಯವನ್ನು ನಾವು ಹುಡುಕುತ್ತಿದ್ದೇವೆ~ ಎಂದು ಅಮೆರಿಕ ವಿದೇಶಾಂಗ ಇಲಾಖೆ ವಕ್ತಾರ ಮಾರ್ಕ್ ಟೋನರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.