ADVERTISEMENT

ಹಿಂದೂಗಳ ಮೇಲೆ ದಾಳಿ ಬೇಡ: ಅಲ್ ಜವಾಹಿರಿ

ಅಲ್‌ಖೈದಾ ಹೊಸ ಕಾರ್ಯತಂತ್ರ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 19:59 IST
Last Updated 17 ಸೆಪ್ಟೆಂಬರ್ 2013, 19:59 IST

ಲಂಡನ್‌ (ರಾಯಿಟರ್ಸ್): ‘ಮುಸ್ಲಿಂ ರಾಷ್ಟ್ರ ಗಳಲ್ಲಿರುವ ಹಿಂದೂ ಹಾಗೂ ಇತರ ಮುಸ್ಲಿಂ ಪಂಗಡಗಳ ಮೇಲೆ ದಾಳಿ ಮಾಡ­ಬಾರದು’ ಎಂದು ಅಲ್ ಖೈದಾ  ಮುಖಂಡ ಅಯ್ಮನ್ ಅಲ್ ಜವಾಹಿರಿ ತಾಕೀತು ಮಾಡಿದ್ದಾನೆ.

ಇದೇ ಮೊದಲ ಬಾರಿ, ಜವಾಹಿರಿ ಜಿಹಾದ್‌ಗೆ (ಧರ್ಮಯುದ್ಧ) ನಿರ್ದಿಷ್ಟ ಮಾರ್ಗಸೂಚಿ ನೀಡಿದ್ದಾನೆ ಎನ್ನುವುದು ಗಮನಾರ್ಹ ಸಂಗತಿ.
‘ಮುಸ್ಲಿಂ ರಾಷ್ಟ್ರಗಳಲ್ಲಿರುವ ಕ್ರೈಸ್ತರು, ಹಿಂದೂಗಳು, ಸಿಖ್ಖರ ಮೇಲೆ ದಾಳಿ ಮಾಡಬೇಡಿ. ಮಹಿಳೆಯರು ಮತ್ತು ಮಕ್ಕಳನ್ನು ಗೌರವದಿಂದ ಕಾಣಿರಿ.  ಮಸೀದಿಯಲ್ಲಿ, ಮಾರುಕಟ್ಟೆ ಯಲ್ಲಿ ಮತ್ತು ಸಾರ್ವಜನಿಕ ಸಭೆಗಳಲ್ಲಿ  ಮುಸ್ಲಿಮರ ಜತೆ ಇರುವ ವೈರಿಗಳನ್ನು   ಕೊಲ್ಲಬಾರದು’ ಎಂದೂ ಜವಾಹಿರಿ ತನ್ನ  ಬೆಂಬಲಿಗರಿಗೆ ಹಿತೋಪದೇಶ ನೀಡಿದ್ದಾನೆ.

ಆಫ್ಘಾನಿಸ್ತಾನ, ಇರಾಕ್‌, ಸಿರಿಯಾ, ಯೆಮನ್‌ ಹಾಗೂ ಸೋಮಾಲಿಯಾ ಸೇರಿ ಎಲ್ಲೆಲ್ಲಿ ಸಂಘರ್ಷ ಅನಿ­ವಾರ್ಯ ಎನ್ನುವುದನ್ನೂ ಆತ ಉಲ್ಲೇಖಿಸಿದ್ದಾನೆ.
‘ಪಾಕಿಸ್ತಾನದಲ್ಲಿ ಜಿಹಾದಿಗಳಿಗೆ ಸುರಕ್ಷಿತ ನೆಲೆ ಕಂಡುಕೊಳ್ಳಬೇಕು.  ಪಾಕ್‌್ನಲ್ಲಿ ಸಂಪೂರ್ಣ ಇಸ್ಲಾಂ ವ್ಯವಸ್ಥೆ ರೂಪಿಸುವುದಕ್ಕೆ ಇದು ಸಹಕಾರಿಯಾ­ಗಬಹುದು’ ಎಂಬುದು ಆತನ ಲೆಕ್ಕಾಚಾರ.

ಅಲ್‌ಖೈದಾ ಹೊಸ ಕಾರ್ಯತಂತ್ರ: ವಿಶ್ವ ವಾಣಿಜ್ಯ ಕಟ್ಟಡದ ಅವಳಿ ಗೋಪುರದ ಮೇಲೆ 2001ರ ಸೆಪ್ಟೆಂಬರ್‌್ 11 ರಂದು ನಡೆಸಿದ ದಾಳಿಯ ನಂತರ ಇದೇ ಮೊದಲ ಬಾರಿ ಅಲ್‌ ಖೈದಾ ಇಂಥದ್ದೊಂದು ಕಾರ್ಯತಂತ್ರ ರೂಪಿಸಿದೆ.

ಉತ್ತರ ಆಫ್ರಿಕಾದಿಂದ ಹಿಡಿದು ಕಾಶ್ಮೀರದವರೆಗೆ ಅಲ್‌ ಖೈದಾ ಯಾವ ರೀತಿ ಕಣ್ಣಿಟ್ಟಿದೆ ಎನ್ನುವ ವಿವರ ಕೂಡ ಇದರಲ್ಲಿದೆ. ಹೋರಾಟ ಹಾಗೂ  ಹಿಂಸೆಯ ಮೂಲಕ ಅಮೆರಿಕ ಮತ್ತು ಇಸ್ರೇಲ್‌  ಅಸ್ಥಿರಗೊಳಿಸುವ ಉದ್ದೇಶದ ಜತೆ­ಯಲ್ಲಿಯೇ  ಧರ್ಮಪ್ರಚಾರದ (ದವಾ) ಮಹತ್ವವನ್ನೂ ಜವಾಹಿರಿ ಒತ್ತಿ ಹೇಳಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.