ADVERTISEMENT

ಹೂಡಿಕೆಗೆ ಭಾರತವೇ ಪ್ರಶಸ್ತ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2011, 19:30 IST
Last Updated 2 ಅಕ್ಟೋಬರ್ 2011, 19:30 IST
ಹೂಡಿಕೆಗೆ ಭಾರತವೇ ಪ್ರಶಸ್ತ
ಹೂಡಿಕೆಗೆ ಭಾರತವೇ ಪ್ರಶಸ್ತ   

ಜಿನಿವಾ (ಪಿಟಿಐ): ಜಾಗತಿಕ ಆರ್ಥಿಕ ಕುಸಿತವು ಭಾರತದ ಮೇಲೆ ಹೆಚ್ಚೇನು ಪರಿಣಾಮ ಬೀರಿರದ  ಮಹತ್ವವನ್ನು ಪ್ರತಿಪಾದಿಸಿರುವ ರಾಷ್ಟ್ರಪತಿ ಪ್ರತಿಭಾ ಪಾಟೀಲ್, `ಭಾರತೀಯ ಆರ್ಥಿಕತೆಯು ಸ್ಥಿರ ಉನ್ನತ ಬೆಳವಣಿಗೆ ದರವನ್ನು ದಾಖಲಿಸುವುದರೊಂದಿಗೆ, ಬಂಡವಾಳ ಹೂಡಿಕೆಗೆ ದೇಶವು ಅತ್ಯಾಕರ್ಷಕ ತಾಣವಾಗಿ ಹೊರಹೊಮ್ಮಿದೆ~ ಎಂದು ತಿಳಿಸಿದ್ದಾರೆ.

 ಇಲ್ಲಿ ಭಾರತದ ರಾಯಭಾರಿಯಾಗಿರುವ ಮಾಜಿ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರ ಪುತ್ರಿ ಚಿತ್ರಾ ಅವರು ಏರ್ಪಡಿಸಿದ್ದ ಸತ್ಕಾರ ಕೂಟದಲ್ಲಿ ಭಾಗವಹಿಸಿ ಮಾತನಾಡಿದ ಪ್ರತಿಭಾ, `ಭಾರತವು ಬಂಡವಾಳ, ವಿದೇಶಿ ನೇರ ಹೂಡಿಕೆ ಹಾಗೂ ವಾಣಿಜ್ಯ ಕ್ಷೇತ್ರಗಳಲ್ಲಿ ಜಾಗತಿಕ ಅತ್ಯಾಕರ್ಷಣೆಯ ಕೇಂದ್ರವಾಗಿದೆ~ ಎಂದರು.

`ಭಾರತದ ಬೆಳವಣಿಕೆಯು ಪರಸ್ಪರ ಲಾಭದಾಯಕ ಸಹಕಾರದಡಿ ಅನೇಕ ಸದವಕಾಶಗಳನ್ನು ಕಲ್ಪಿಸಿದೆ. 2003ರಿಂದ ದೇಶದ ಆರ್ಥಿಕ ದರ ಸ್ಥಿರವಾಗಿ ಉನ್ನತ ಬೆಳವಣಿಗೆಯಲ್ಲಿದೆ.  ಜಾಗತಿಕ ಆರ್ಥಿಕ ಕುಸಿತ ರಾಷ್ಟ್ರದ ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲ~ ಎಂದು ಅವರು ಹೇಳಿದರು.

`ಕಳೆದ ಕೆಲವು ವರ್ಷಗಳಿಂದ ದೇಶದಲ್ಲಿ ಜಾಗತಿಕ ಬಂಡವಾಳ ಹೂಡಿಕೆ, ವಿದೇಶಿ ನೇರ ಬಂಡವಾಳ ಹಾಗೂ ವಾಣಿಜ್ಯ ಚಟುವಟಿಕೆಗಳು ಹೆಚ್ಚಿದ್ದು, ಇದರಿಂದ ವಿಶ್ವದ ಅತ್ಯಂತ ಆಕರ್ಷಕ ಮಾರುಕಟ್ಟೆ ಪ್ರದೇಶವಾಗಿ ಭಾರತ ಇಂದು ಎದ್ದು ನಿಂತಿದೆ~ ಎಂದು ಅವರು ಅಭಿಪ್ರಾಯಪಟ್ಟರು.

1991ರಲ್ಲಿ ಭಾರತೀಯ ಆರ್ಥಿಕತೆಯು ಜಾಗತಿಕ ಮಟ್ಟದಲ್ಲಿ ತೆರೆಯಲ್ಪಟ್ಟು, ಉತ್ತಮ ಸ್ಪರ್ಧೆಯನ್ನು ಎದುರಿಸಿತು. ಇದರಿಂದ ಜಾಗತಿಕವಾಗಿ ದೇಶದ ವಾಣಿಜ್ಯ ವ್ಯವಹಾರ ವಿಸ್ತರಿಸಿತು ಎಂದೂ ತಿಳಿಸಿದರು.

`ದೇಶದ ಆರ್ಥಿಕ ಬೆಳವಣಿಗೆಯು ಸಮಾಜದ ಎಲ್ಲ ವರ್ಗಗಳನ್ನು, ಅದರಲ್ಲೂ ವಿಶೇಷವಾಗಿ ಬಡವರನ್ನು ತಲುಪಬೇಕಿದ್ದು, ಇದರಿಂದ ಅವರು ಉತ್ತಮ ಜೀವನ ಸಾಗಿಸಬಹುದು. ಇದು ನಮ್ಮ ಜನಸಂಖ್ಯೆಯ ಶೇ 50ರಷ್ಟಿರುವ ಯುವಜನರ ಆಶೋತ್ತರಗಳಿಗೆ ಸ್ಪಂದಿಸಿ, ಸವಾಲುಗಳನ್ನು ಎದುರಿಸಲು ನೆರವಾಗಬೇಕು.

ಉನ್ನತ ಶಿಕ್ಷಣ ಮತ್ತು ತರಬೇತಿಯ ಮೂಲಕ ದೇಶದ ಎಲ್ಲ ಭಾಗಗಳ ಜನರಿಗೂ ಆರ್ಥಿಕ ಅಭಿವೃದ್ಧಿಯ ಲಾಭ ಸಿಗಬೇಕು~ ಎಂದು ಅವರು ನುಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.