ವಾಷಿಂಗ್ಟನ್(ಪಿಟಿಐ): ಕ್ರೀಡಾ-ಪಟುಗಳಿಗೆ ನಡೆಸುವಉದ್ದೀಪನ ಮದ್ದುಸೇವನೆ ಪರೀಕ್ಷೆ (ಡೋಪಿಂಗ್ ಟೆಸ್ಟ್) ಯಲ್ಲಿ ನೂತನ ಆವಿಷ್ಕಾರ ಆಗಿದ್ದು, ಈಗಿರುವ ಪರೀಕ್ಷೆಗಿಂತ ಹೊಸ ಪರೀಕ್ಷೆ ಸಾವಿರ ಪಟ್ಟು ಹೆಚ್ಚು ನಿಖರವಾಗಿರಲಿದೆ ಎಂದು ಸಂಶೋಧಕರು ಹೇಳಿದ್ದಾರೆ.
‘ಎಷ್ಟು ಪ್ರಮಾಣದಲ್ಲಿ ಮಾದಕ ಪದಾರ್ಥ ಸೇವಿಸಲಾಗಿದೆ ಅಥವಾ ಎಷ್ಟು ಕಾಲದ ಹಿಂದೆ ಮದ್ದು ಸೇವಿಸಲಾಗಿದೆ ಎಂಬುದನ್ನು ಪರೀಕ್ಷಕರು ನಿಖರವಾಗಿ ಕಂಡುಹಿಡಿಯಲು ಸಾಧ್ಯವಿಲ್ಲ. ಆದರೆ, ಹೊಸ ಪರೀಕ್ಷೆ ಮಾತ್ರ ಈಗಿರುವ ವಿಧಾನಕ್ಕಿಂತ ಹೆಚ್ಚು ಸೂಕ್ಷ್ಮವಾಗಿದೆ’ ಎಂದು ಸಂಶೋಧನಾ ತಂಡದ ನೇತೃತ್ವ ವಹಿಸಿದ್ದ ಅರ್ಲಿಂಗ್ಟನ್‌ನ ಟೆಕ್ಸಾಸ್ ವಿಶ್ವವಿದ್ಯಾಲಯದ ಡೇನಿಯಲ್ ಆರ್ಮ್‌ಸ್ಟ್ರಾಂಗ್ ತಿಳಿಸಿದ್ದಾರೆ.
ಉದ್ದೀಪನ ಮದ್ದು ಸೇವನೆ ಪರೀಕ್ಷೆಯಲ್ಲಿ ಸಾಮಾನ್ಯವಾಗಿ ಮಾಸ್ ಸ್ಪೆಕ್ಟ್ರೋಮೆಟ್ರಿ (ಎಂಎಸ್) ವಿಧಾನವನ್ನು ಅನುಸರಿಸಲಾಗುತ್ತದೆ. ಈ ವಿಧಾನವನ್ನು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ, ಯುಎಸ್ ಆ್ಯಂಟಿ ಡೋಪಿಂಗ್ ಏಜೆನ್ಸಿಗಳು ಮಾನ್ಯ ಮಾಡಿದ್ದು, ಕ್ರೀಡಾಪಟುಗಳು ಉದ್ದೀಪನ ಮದ್ದು ಸೇವಿಸಿದ್ದಾರೆಯೇ ಇಲ್ಲವೇ ಎಂಬುದನ್ನು ಪತ್ತೆ ಹಚ್ಚಲು ಬಳಸಲಾಗುತ್ತದೆ.
ಎಂಎಸ್ ವಿಧಾನ ದೇಹದಲ್ಲಿ ಬೇರೆಬೇರೆ ಅಂಶಗಳು ಒಟ್ಟಾಗಿರುವುದನ್ನು ಬೇರ್ಪಡಿಸುತ್ತದೆ. ರಕ್ತ, ಮೂತ್ರ ಇಲ್ಲವೇ ದೇಹದಲ್ಲಿರುವ ದ್ರವ್ಯಗಳಲ್ಲಿ ಉಳಿದಿರುವ ಮಾದಕ ಪದಾರ್ಥವನ್ನು ಇದು ಪತ್ತೆ ಹಚ್ಚುತ್ತದೆ. ಆದರೆ, ಈ ವಿಧಾನದಲ್ಲಿ ದೇಹದಲ್ಲಿ ನಡೆಯುವ ಚಯಾಪಚನ ಕ್ರಿಯೆಯ ಸಂದರ್ಭದಲ್ಲಿ ಸಣ್ಣ ಋಣಾತ್ಮಕ ವಿದ್ಯುದಾವೇಶ ಉತ್ಪತ್ತಿಯಾಗುತ್ತದೆ. ಇದರಿಂದ ಕೆಲ ಸಣ್ಣ ಅಂಶಗಳಲ್ಲಿ ಉಳಿದಿರಬಹುದಾದ ಮಾದಕ ಪದಾರ್ಥವನ್ನು ಪತ್ತೆ ಮಾಡಲು ಸಾಧ್ಯವಿಲ್ಲ. ಇದನ್ನು ಎಂಎಸ್ ವಿಧಾನದಿಂದ ಒಂದೇ ಬಾರಿಗೆ ಸುಲಭವಾಗಿ ಪತ್ತೆ ಹಚ್ಚುವುದೂ ಕೂಡಾ ಕಷ್ಟ. ಆದರೆ, ನೂತನ ವಿಧಾನದಲ್ಲಿ ಇಂಥ ಸಣ್ಣ ಅಂಶಗಳಲ್ಲೂ ಇರುವ ಮಾದಕ ಪದಾರ್ಥದ ಪ್ರಮಾಣವನ್ನು ಸುಲಭವಾಗಿ ಪತ್ತೆ ಹಚ್ಚಬಹುದು.
ಆರ್ಮ್‌ಸ್ಟ್ರಾಂಗ್‌ನ ಪ್ರಯೋಗಾಲಯದಲ್ಲಿ ನಡೆಸಲಾದ ಜೋಡಿ ಅಯಾನ್ ಎಲೆಕ್ಟ್ರೋಸ್ಪ್ರೇ ಐಯಾನೈಸೇಷನ್ (ಪೀಜಿ) ವಿಧಾನದಲ್ಲಿ ದೇಹದಲ್ಲಿ ಉಳಿದಿರಬಹುದಾದ ಸಣ್ಣ ಪ್ರಮಾಣದ ಮಾದಕ ಪದಾರ್ಥಗಳನ್ನೂ ಪತ್ತೆ ಹಚ್ಚಬಹುದು. ಈ ವಿಧಾನವನ್ನು ಉದ್ದೀಪನ ಮದ್ದುಸೇವನೆ ಪರೀಕ್ಷೆಯಷ್ಟೇ ಅಲ್ಲ, ಮದ್ಯಸೇವನೆ ಪರೀಕ್ಷೆಗೂ ಬಳಸಬಹುದು ಎಂದು ಸಂಶೋಧಕರು ಹೇಳಿದ್ದಾರೆ.
ನೂತನ ಪರೀಕ್ಷಾ ವಿಧಾನಕ್ಕೆ ಹೊಸ ಉಪಕರಣಗಳ ಅಗತ್ಯವಿಲ್ಲ. ಈಗಿರುವ ಎಂಎಸ್ ವಿಧಾನವನ್ನೇ ತುಸು ಮಾರ್ಪಡಿಸಿದರೆ ಸಾಕು. ಒಂದು ರಾಸಾಯನಿಕ ಅಂಶವನ್ನು ಸೇರಿಸಿದಲ್ಲಿ ಎಂಎಸ್ ವಿಧಾನದಲ್ಲೇ ಪೀಜಿ ವಿಧಾನವನ್ನೂ ಮಾಡಬಹುದು. ಈ ಪದಾರ್ಥ ಮಾರುಕಟ್ಟೆಯಲ್ಲಿ ಕಡಿಮೆ ದರದಲ್ಲಿ ಸಿಗುತ್ತದೆ
ಎನ್ನುವುದು ಸಂಶೋಧಕರು ಹೇಳಿಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.