ADVERTISEMENT

ಬಾಂಗ್ಲಾದೇಶ: ಬಿಜಿಬಿಯ 147 ತುಕಡಿಗಳ ನಿಯೋಜನೆ

ಹಂಗಾಮಿ ಸರ್ಕಾರ ರಚನೆಗೆ ಆಗ್ರಹ: ವಿರೋಧ ಪಕ್ಷದಿಂದ ರಸ್ತೆ, ರೈಲು ತಡೆ

ಪಿಟಿಐ
Published 24 ಡಿಸೆಂಬರ್ 2023, 16:33 IST
Last Updated 24 ಡಿಸೆಂಬರ್ 2023, 16:33 IST
   

ಢಾಕಾ: ಪ್ರಧಾನಿ ಶೇಖ್‌ ಹಸೀನಾ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ವಿರೋಧ ಪಕ್ಷ ಬಾಂಗ್ಲಾದೇಶ ನ್ಯಾಷನಲಿಸ್ಟ್‌ ಪಾರ್ಟಿ (ಬಿಎನ್‌ಪಿ) ಹಾಗೂ ಮಿತ್ರಪಕ್ಷಗಳು ಭಾನುವಾರ ರಸ್ತೆ ಮತ್ತು ರೈಲು ತಡೆ ನಡೆಸಿದ ಕಾರಣ, ದೇಶದಾದ್ಯಂತ ಭದ್ರತೆಗಾಗಿ ಬಾರ್ಡರ್‌ ಗಾರ್ಡ್‌ ಬಾಂಗ್ಲಾದೇಶ (ಬಿಜಿಬಿ)ದ 147 ತುಕಡಿಗಳನ್ನು ನಿಯೋಜಿಸಲಾಗಿತ್ತು. 

ದೇಶದ ಸಂವಿಧಾನವನ್ನು ತಿದ್ದುಪಡಿ ಮಾಡಿ, ಪಕ್ಷೇತರ ಹಂಗಾಮಿ ಸರ್ಕಾರ ರಚಿಸಬೇಕು ಮತ್ತು ಅದರ ಮೇಲ್ವಿಚಾರಣೆಯಲ್ಲಿ ನ್ಯಾಯಸಮ್ಮತವಾದ ಚುನಾವಣೆ ನಡೆಸಬೇಕು ಎಂದು ವಿರೋಧ ಪಕ್ಷ ಆಗ್ರಹಿಸಿದೆ. ಜನವರಿ 7ರಂದು ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ.

ರಾಜಧಾನಿ ಢಾಕಾದಲ್ಲಿ ಬಿಎನ್‌ಪಿ ಮತ್ತು ಅದರ ಮಿತ್ರ ಪಕ್ಷಗಳು ಪ್ರತ್ಯೇಕವಾಗಿ ಪ್ರತಿಭಟನಾ ಮೆರವಣಿಗೆಗಳನ್ನು ನಡೆಸಿವೆ.

ADVERTISEMENT

ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಕಾರರು, ವಶಕ್ಕೆ ಪಡೆದಿರುವ ವಿರೋಧ ಪಕ್ಷದ ನಾಯಕರು ಮತ್ತು ಹೋರಾಟಗಾರರನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ಬಿಎನ್‌ಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಕ್ಷೇತರ ಹಂಗಾಮಿ ಸರ್ಕಾರ ರಚನೆಗೆ ಆಗ್ರಹಿಸಿರುವ ಬಿಎನ್‌ಪಿ, ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಹೇಳಿದೆ. ಬಿಎನ್‌ಪಿಯು ಚುನಾವಣೆಯನ್ನು ಬಹಿಷ್ಕರಿಸಿದರೆ ಶೇಖ್‌ ಹಸೀನಾ ಅವರ ಅವಾಮಿ ಲೀಗ್‌ ಪಕ್ಷವು ಬಹುಮತದಿಂದ ಗೆದ್ದು, ಸತತ ನಾಲ್ಕನೇ ಅವಧಿಗೆ ಅಧಿಕಾರಕ್ಕೇರಲಿದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.