ADVERTISEMENT

ಆರ್‌ಸಿಇಪಿಗೆ 15 ರಾಷ್ಟ್ರಗಳ ಸಹಿ

ವ್ಯಾಪಾರ ಒಪ್ಪಂದದಿಂದ ಹೊರಗೆ ಉಳಿದ ಭಾರತ: ಸೇರ್ಪಡೆಗೆ ಇನ್ನೂ ಇದೆ ಅವಕಾಶ

ಪಿಟಿಐ
Published 15 ನವೆಂಬರ್ 2020, 20:46 IST
Last Updated 15 ನವೆಂಬರ್ 2020, 20:46 IST
ಆಸಿಯಾನ್‌ನ 37ನೇ ಶೃಂಗಸಭೆ ವರ್ಚುವಲ್‌ ಮಾಧ್ಯಮದಲ್ಲಿ ನಡೆಯಿತು –ರಾಯಿಟರ್ಸ್‌ ಚಿತ್ರ
ಆಸಿಯಾನ್‌ನ 37ನೇ ಶೃಂಗಸಭೆ ವರ್ಚುವಲ್‌ ಮಾಧ್ಯಮದಲ್ಲಿ ನಡೆಯಿತು –ರಾಯಿಟರ್ಸ್‌ ಚಿತ್ರ   

ಸಿಂಗಪುರ : ಚೀನಾ ಸೇರಿದಂತೆ ಏಷ್ಯಾದ 15 ರಾಷ್ಟ್ರಗಳು ಜಗತ್ತಿನ ಅತಿ ದೊಡ್ಡ ವ್ಯಾಪಾರ ಒಪ್ಪಂದ, ‘ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ’ಕ್ಕೆ (ಆರ್‌ಸಿಇಪಿ) ಭಾನುವಾರ ಸಹಿ ಮಾಡಿವೆ. ಭಾರತ ಇದರಿಂದ ಹೊರಗುಳಿದಿದೆ.

ಆಗ್ನೇಯ ಏಷ್ಯಾದ ನಾಯಕರು ಹಾಗೂ ಅವರ ಪ್ರಾದೇಶಿಕ ಪಾಲುದಾರರ (ಎಎಸ್‌ಇಎಎನ್‌) ವಾರ್ಷಿಕ ಶೃಂಗಸಭೆಯ ನಂತರ
ಈ ಒಪ್ಪಂದಕ್ಕೆ ಸಹಿ ಮಾಡಲಾಗಿದೆ. ನಾಲ್ಕು ದಿನಗಳ ಸಭೆಯನ್ನು ಕೋವಿಡ್‌–19 ಕಾರಣದಿಂದ ಈ ವರ್ಷ ವರ್ಚುವಲ್‌ ಮಾಧ್ಯಮದಲ್ಲಿ ನಡೆಸಲಾಗಿತ್ತು.

ಸತತ ಎಂಟು ವರ್ಷಗಳ ಮಾತುಕತೆಯ ನಂತರ 15 ರಾಷ್ಟ್ರಗಳ ಮಧ್ಯೆ ಈ ಒಪ್ಪಂದ ನೆರವೇರಿದೆ. ಸಹಿ ಮಾಡಿರುವ ಎಲ್ಲಾ ರಾಷ್ಟ್ರಗಳು ಎರಡು ವರ್ಷಗಳೊಳಗೆ ಈ ಒಪ್ಪಂದ ಜಾರಿಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿದೆ. ವಿಶ್ವ ಆರ್ಥಿಕತೆಯ ಮೂರನೇ ಒಂದು ಭಾಗವನ್ನು ಒಳಗೊಂಡಿರುವ ಈ ಒಪ್ಪಂದವು ಮುಂಬರುವ ವರ್ಷಗಳಲ್ಲಿ ಅನೇಕ ಪ್ರದೇಶಗಳಲ್ಲಿ ಸುಂಕವನ್ನು ಕಡಿಮೆ ಮಾಡಲು ಸಹಾಯಕವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ADVERTISEMENT

ಏಷ್ಯಾದ ಪ್ರಮುಖ ಗ್ರಾಹಕ ಕೇಂದ್ರಿತ ಮಾರುಕಟ್ಟೆ ಎನಿಸಿರುವ ಭಾರತವು ಕಳೆದ ವರ್ಷ ಈ ಮಾತುಕತೆಯಿಂದ ಹೊರಬಂದಿತ್ತು. ಸುಂಕ ಕಡಿಮೆ ಮಾಡುವುದರಿಂದ ಭಾರತೀಯ ಮಾರುಕಟ್ಟೆಗೆ ವಿದೇಶಿ ಉತ್ಪನ್ನಗಳು ಎಗ್ಗಿಲ್ಲದೆ ಹರಿದು ಬರಬಹುದು. ಇದರಿಂದ ಸ್ಥಳೀಯ ತಯಾರಕರಿಗೆ ಹಾನಿಯಾಗುವುದೆಂಬ ಕಾರಣಕ್ಕೆ ಭಾರತ ಈ ನಿರ್ಧಾರ ಕೈಗೊಂಡಿತ್ತು.

ಆದರೆ, ‘ಭಾರತಕ್ಕೆ ಈಗಲೂ ಆರ್‌ಸಿಇಪಿ ಬಾಗಿಲು ತೆರೆದುಕೊಂಡಿದೆ' ಎಂದು ಇತರ ರಾಷ್ಟ್ರಗಳು ಕಳೆದ ವರ್ಷ ಹೇಳಿದ್ದವು. ಈ ಹೇಳಿಕೆಯ ಹಿಂದೆ ಚೀನಾದ ಚಿತಾವಣೆ ಇತ್ತು ಎಂದೂ ಆರೋಪಿಸಲಾಗಿದೆ.

ಒಪ್ಪಂದವು ಮುಂದಿನ ದಿನಗಳಲ್ಲಿ ನಮ್ಮ ಆರ್ಥಿಕ ಅಭಿವೃದ್ಧಿಗೆ ಸಹಾಯಕವಾಗಲಿದೆ ಎಂದು ಸಹಿಮಾಡಿರುವ ರಾಷ್ಟ್ರಗಳು ಹೇಳಿವೆ.

ಸಹಿಮಾಡಿದ ರಾಷ್ಟ್ರಗಳು

ಇಂಡೊನೇಷ್ಯಾ, ಮಲೇಷ್ಯಾ, ಫಿಲಿಪ್ಪೀನ್ಸ್‌, ಸಿಂಗಪುರ, ಥಾಯ್ಲೆಂಡ್‌, ಬ್ರೂನಿ, ವಿಯೆಟ್ನಾಂ, ಲಾವೋಸ್‌, ಮ್ಯಾನ್ಮಾರ್‌ ಹಾಗೂ ಕಾಂಬೋಡಿಯಾ ಒಪ್ಪಂದಕ್ಕೆ ಸಹಿ ಮಾಡಿವೆ. ಆರ್‌ಸಿಇಪಿಪ್ರಸ್ತಾವವನ್ನು 2012ರಲ್ಲಿ ಈ ದೇಶಗಳ ಮುಂದೆ ಇರಿಸಲಾಗಿತ್ತು. ಆ ನಂತರ ಚೀನಾ, ಜಪಾನ್‌, ದಕ್ಷಿಣ ಕೊರಿಯಾ, ನ್ಯೂಜಿಲೆಂಡ್‌ ಹಾಗೂ ಆಸ್ಟ್ರೇಲಿಯಾಗಳನ್ನೂ ಇದರ ಪರಿಧಿಯೊಳಗೆ
ಸೇರಿಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.