ವಿಶ್ವಸಂಸ್ಥೆ(ಪಿಟಿಐ): ಸಂಸತ್ತಿನಲ್ಲಿ ಮಹಿಳೆಯರ ಪ್ರಾತಿನಿಧ್ಯದ ಪ್ರಶ್ನೆ ಬಂದಾಗ ವಿಶ್ವದ 189 ದೇಶಗಳಲ್ಲಿ ಭಾರತವು 111ನೇ ಸ್ಥಾನ ಪಡೆದಿದೆ.
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಲುವಾಗಿ ಶುಕ್ರವಾರ ಅಂತರರಾಷ್ಟ್ರೀಯ ಸಂಸದೀಯ ಸಮಿತಿ (ಐಪಿಯು) ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಐಪಿಯು ಒಟ್ಟು 189 ದೇಶಗಳ ಸಂಸತ್ತಿನಲ್ಲಿ ಮಹಿಳೆಯರ ಸಂಖ್ಯೆ ಕುರಿತು ವಿಶ್ಲೇಷಣೆ ನಡೆಸಿ ಪಟ್ಟಿ ಪ್ರಕಟಿಸಿತ್ತು. ಈ ರ್‍್ಯಾಂಕ್ ಪಟ್ಟಿಯಲ್ಲಿ ಭಾರತ 111ನೇ ಸ್ಥಾನ ಪಡೆದಿದೆ.
ಭಾರತದ ಲೋಕಸಭೆಯ ಒಟ್ಟು 545 ಸಂಸದರಲ್ಲಿ 62 ಜನ ಮಹಿಳೆಯರು ಹಾಗೂ ರಾಜ್ಯಸಭೆಯ ಒಟ್ಟು 245 ಸದಸ್ಯರಲ್ಲಿ 28 ಜನ ಮಹಿಳೆಯರು ಇದ್ದಾರೆ. ಲೋಕಸಭೆಯಲ್ಲಿ ಶೇ.11.4ರಷ್ಟು ಹಾಗೂ ರಾಜ್ಯಸಭೆಯಲ್ಲಿ ಶೇ. 11.4ರಷ್ಟು ಮಹಿಳೆಯರು ಸಂಸತ್ತನ್ನು ಪ್ರತಿನಿಧಿಸುತ್ತಿದ್ದಾರೆ ಎಂದು ಐಪಿಯು ತಿಳಿಸಿದೆ.
ವಿವಿಧ ದೇಶದಲ್ಲಿ ಈ ಹಿಂದಿನ ತಲೆಮಾರಿಗಿಂತ ಹೆಚ್ಚು ಮಹಿಳೆಯರು ಸಂಸತ್ತಿನಲ್ಲಿ ಭಾಗವಹಿಸುವ ಮೂಲಕ ದೇಶದಲ್ಲಿ ಲಿಂಗಸಮಾನತೆಯನ್ನು ಸಾಧಿಸಿದೆ. 2013ರಲ್ಲಿ ನಡೆದ ಚುನಾವಣೆ ಬಳಿಕ ವಿಶ್ವದ ಸಂಸತ್ತುಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಶೇಕಡಾ 1.5 ರಷ್ಟು ಹೆಚ್ಚಳವಾಗಿದೆ ಎಂದು ಐಪಿಯು ತನ್ನ ವಾರ್ಷಿಕ ವಿಶ್ಲೇಷಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.