ADVERTISEMENT

4,500 ವರ್ಷಗಳ ಹಿಂದೆಯೇ ದ್ರಾವಿಡ ಭಾಷೆಗಳ ಉಗಮ

ರಾಯಲ್ ಸೊಸೈಟಿ ಓಪನ್ ಸೈನ್ಸ್‌ನಲ್ಲಿ ಪ್ರಕಟ

ಪಿಟಿಐ
Published 22 ಮಾರ್ಚ್ 2018, 20:12 IST
Last Updated 22 ಮಾರ್ಚ್ 2018, 20:12 IST

ಬರ್ಲಿನ್: ದಕ್ಷಿಣ ಭಾರತ ಮತ್ತು ಮಧ್ಯ ಭಾರತದ ಸುಮಾರು 22 ಕೋಟಿ ಮಂದಿ ಮಾತನಾಡುವ, 80 ವಿಧಗಳನ್ನು ಹೊಂದಿರುವ ದ್ರಾವಿಡ ಭಾಷೆ
ಗಳು 4,500 ವರ್ಷಗಳ ಹಿಂದೆಯೇ ಉಗಮವಾಗಿದ್ದವು ಎಂದು ಸಂಶೋಧನೆಯೊಂದು ತಿಳಿಸಿದೆ.

ಜರ್ಮನಿಯ ಮ್ಯಾಕ್ಸ್‌ ಪ್ಲಾಂಕ್‌ ಮಾನವ ಇತಿಹಾಸದ ವಿಜ್ಞಾನ ಸಂಸ್ಥೆ ಮತ್ತು ಡೆಹ್ರಾಡೂನ್‌ನ ಭಾರತೀಯ ವನ್ಯಜೀವಿ ಸಂಸ್ಥೆ ಜಂಟಿಯಾಗಿ ಈ ಭಾಷಾ ವಿಶ್ಲೇಷಣೆ ನಡೆಸಿವೆ. ‘ರಾಯಲ್ ಸೊಸೈಟಿ ಓಪನ್ ಸೈನ್ಸ್’ ನಿಯತಕಾಲಿಕದಲ್ಲಿ ಈ ವರದಿ ಪ್ರಕಟವಾಗಿದೆ. ಈ ಅಧ್ಯಯನಕ್ಕೆ ದ್ರಾವಿಡ ಭಾಷೆಗಳ ಉಪಪಂಗಡಗಳ ಸ್ಥಳೀಯರನ್ನು ನೇರವಾಗಿ ಮಾತನಾಡಿಸಿ, ದತ್ತಾಂಶ ಸಂಗ್ರಹಿಸಲಾಗಿದೆ. ಈ ಮೊದಲಿನ ಭಾಷಾ ಮತ್ತು ಪ್ರಾಚ್ಯವಸ್ತು ಅಧ್ಯಯನಗಳ ಫಲಿತಾಂಶವನ್ನೇ ಈ ಅಧ್ಯಯನದ ಫಲಿತಾಂಶವೂ ಹೋಲುತ್ತದೆ.

ಪಶ್ಚಿಮದಲ್ಲಿ ಅಫ್ಗಾನಿಸ್ತಾನ, ಪೂರ್ವದಲ್ಲಿ ಬಾಂಗ್ಲಾದೇಶವನ್ನು ಒಳಗೊಂಡಿರುವ ದಕ್ಷಿಣ ಏಷ್ಯಾ ವಲಯ, ದ್ರಾವಿಡ, ಇಂಡೊ–ಯುರೋಪಿಯನ್ ಮತ್ತು ಸೈನೊ–ಟಿಬಿಟಿಯನ್ ಸೇರಿದಂತೆ ಆರು ದೊಡ್ಡ ಭಾಷಾ ಕುಟುಂಬಗಳನ್ನು ಮತ್ತು ಕನಿಷ್ಠ 600 ಭಾಷೆಗಳನ್ನು ಒಳಗೊಂಡಿದೆ.

ADVERTISEMENT

ದ್ರಾವಿಡ ಭಾಷೆಗಳಾದ ಕನ್ನಡ, ಮಲಯಾಳಂ, ತಮಿಳು ಮತ್ತು ತೆಲುಗಿನಲ್ಲಿ ಬಹು ಹಿಂದೆ ರಚಿಸಿರುವ ಸಾಕಷ್ಟು ಸಾಹಿತ್ಯ ಕೃತಿಗಳು ಲಭ್ಯವಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.  3,500 ವರ್ಷಗಳ ಹಿಂದೆ ಇಂಡೊ–ಆರ್ಯನ್ನರು ಭಾರತಕ್ಕೆ ಬರುವ ಮೊದಲೇ ದ್ರಾವಿಡರು ಭಾರತ ಉಪಖಂಡದಲ್ಲಿ ವಾಸಿಸುತ್ತಿದ್ದರು ಎಂಬುದಕ್ಕೆ ಸಂಶೋಧನಾ ವಲಯದಲ್ಲಿ ಸಹಮತ ಮೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.