ADVERTISEMENT

ಪಾಕ್‌ಗೆ ಭದ್ರತಾ ನೆರವು ಸ್ಥಗಿತ

ಏಜೆನ್ಸೀಸ್
Published 5 ಜನವರಿ 2018, 19:30 IST
Last Updated 5 ಜನವರಿ 2018, 19:30 IST
ಶ್ವೇತ ಭವನ (ಸಂಗ್ರಹ ಚಿತ್ರ)
ಶ್ವೇತ ಭವನ (ಸಂಗ್ರಹ ಚಿತ್ರ)   

ವಾಷಿಂಗ್ಟನ್‌: ‘ಅಫ್ಗನ್‌ ತಾಲಿಬಾನ್‌’, ‘ಹಕ್ಕಾನಿ’ಯಂಥ ಉಗ್ರ ಸಂಘಟನೆಗಳಿಗೆ ಪಾಕಿಸ್ತಾನ ಆಶ್ರಯ ನೀಡುತ್ತಿದ್ದು ಅವುಗಳ ವಿರುದ್ಧ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಆರೋಪಿಸಿರುವ ಅಮೆರಿಕ ಪಾಕಿಸ್ತಾನಕ್ಕೆ ನೀಡಬೇಕಿರುವ ₹7,300ಕೋಟಿಗೂ (1.15ಬಿಲಿಯನ್‌ ಡಾಲರ್‌) ಅಧಿಕ ಮೊತ್ತದ ಭದ್ರತಾ ನೆರವನ್ನು ಸ್ಥಗಿತಗೊಳಿಸಿದೆ.

‘ಪಾಕಿಸ್ತಾನವು ಉಗ್ರರಿಗೆ ಸ್ವರ್ಗವಾಗಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌  ಹೊಸವರ್ಷದಂದು ಟ್ವೀಟ್‌ ಮಾಡಿರುವ ಬೆನ್ನಲ್ಲೇ ಈ ಆದೇಶ ಹೊರಬಿದ್ದಿದೆ. ಈಗ ಸ್ಥಗಿತಗೊಳಿಸಿರುವ ಭದ್ರತಾ ನೆರವಿನಲ್ಲಿ, ಕಾಂಗ್ರೆಸ್‌ ನಿರ್ದೇಶನದ ಮೇರೆಗೆ 2016ರಲ್ಲಿ ವಿದೇಶಿ ಸೇನಾ ನಿಧಿ (ಎಫ್‌ಎಂಎಫ್‌) ಅಡಿ ನೀಡಿರುವ ₹1,600 ಕೋಟಿ (255 ಮಿಲಿಯನ್‌ ಡಾಲರ್‌) ಭದ್ರತಾ ನೆರವು ಕೂಡ ಸೇರಿದೆ.

ಇಷ್ಟೇ ಅಲ್ಲದೇ, ’ಒಕ್ಕೂಟದ ಬೆಂಬಲ ನಿಧಿ’ಯ ಅಡಿ ಪಾಕಿಸ್ತಾನಕ್ಕೆ 2017ರಲ್ಲಿ ನೀಡಿರುವ ₹ 5,700 ಕೋಟಿ (900 ಮಿಲಿಯನ್‌ ಡಾಲರ್‌) ಹಣವನ್ನೂ ಅಮೆರಿಕದ ರಕ್ಷಣಾ ಇಲಾಖೆ ಅಮಾನತುಗೊಳಿಸಿದೆ.

ADVERTISEMENT

‘ಈ ಉಗ್ರ ಸಂಘಟನೆಗಳ ವಿರುದ್ಧ ಪಾಕಿಸ್ತಾನ ಕ್ರಮಕ್ಕೆ ಮುಂದಾಗುವವರೆಗೆ ರಾಷ್ಟ್ರೀಯ ಭದ್ರತಾ ನೆರವು ಅಮಾನತುಗೊಳಿಸುತ್ತಿದ್ದೇವೆ. ಹಾಗೆಂದ ಮಾತ್ರಕ್ಕೆ ಇದನ್ನೇ ನಾವು ಮುಂದುವರಿಸುತ್ತೇವೆ ಎಂದೇನಲ್ಲ. ಒಂದು ವೇಳೆ ಈ ಸಂಘಟನೆಗಳ ವಿರುದ್ಧ ಪಾಕಿಸ್ತಾನ ಭವಿಷ್ಯದಲ್ಲಿ ಕ್ರಮಕ್ಕೆ ಮುಂದಾದರೆ, ಆಗ ಈ ಹಣಕಾಸಿನ ನೆರವನ್ನು ಅದು ಮರಳಿ ಪಡೆಯಬಹುದು’ ಎಂದು ವಿದೇಶಾಂಗ ಇಲಾಖೆಯ ವಕ್ತಾರರಾದ ಹೀದರ್ ನೌರ್ತ್‌ ಪತ್ರಕರ್ತರಿಗೆ ತಿಳಿಸಿದರು.

2017ರ ಹಣಕಾಸಿನ ವರ್ಷದಲ್ಲಿ ₹1,600 ಕೋಟಿ ಭದ್ರತಾ ನೆರವು ಮಂಜೂರು ಮಾಡಲಾಗಿದ್ದು, ಅದರ ಭವಿಷ್ಯವಿನ್ನೂ ನಿರ್ಧಾರವಾಗಿಲ್ಲ ಎಂದು ಅವರು ಹೇಳಿದರು.

‘ಹಫೀಜ್‌ ಬಿಡುಗಡೆಗೂ, ನೆರವು ಸ್ಥಗಿತಕ್ಕೂ ಸಂಬಂಧವಿಲ್ಲ’
ಮುಂಬೈ ದಾಳಿಕೋರ ಹಫೀಜ್‌ ಸಯೀದ್‌ನನ್ನು ಗೃಹ ಬಂಧನದಿಂದ ಬಿಡುಗಡೆ ಮಾಡಿರುವುಕ್ಕೂ, ಪಾಕಿಸ್ತಾನಕ್ಕೆ ನೀಡಬೇಕಿರುವ ಭದ್ರತಾ ನೆರವನ್ನು ರದ್ದು ಮಾಡಿರುವುದಕ್ಕೂ ಸಂಬಂಧವಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ.

‘166 ಮಂದಿಯ ಸಾವಿಗೆ ಕಾರಣವಾಗಿರುವ ಮುಂಬೈ ದಾಳಿಯ ರೂವಾರಿ ಹಫೀಜ್‌ನನ್ನು ಬಿಡುಗಡೆ ಮಾಡಿರುವುದು ನಮಗೆ ತುಂಬಾ ಬೇಸರ ತಂದಿದೆ. ಆದರೆ ಅ ಘಟನೆಗೂ, ಇದಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು  ವಿದೇಶಾಂಗ ಇಲಾಖೆ ವಕ್ತಾರರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.