ADVERTISEMENT

ರಾವತ್‌ ಹೇಳಿಕೆಗೆ ಚೀನಾ ಖಂಡನೆ

ಪಿಟಿಐ
Published 15 ಜನವರಿ 2018, 19:30 IST
Last Updated 15 ಜನವರಿ 2018, 19:30 IST

ಬೀಜಿಂಗ್‌: ‘ಪಾಕಿಸ್ತಾನಕ್ಕಿಂತಲೂ ಚೀನಾ ಗಡಿಯತ್ತ ಹೆಚ್ಚು ಗಮನ ಹರಿಸಬೇಕು’ ಎಂದು ಭಾರತದ ಸೇನಾ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಈಚೆಗೆ ನೀಡಿದ್ದ ಹೇಳಿಕೆಯನ್ನು ಚೀನಾ ಖಂಡಿಸಿದ್ದು, ಇದರಿಂದ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ತಿಳಿಸಿದೆ.

‘ರಾವತ್‌ ಹೇಳಿಕೆ ಎರಡೂ ದೇಶಗಳ ನಡುವಿನ ಸಂಬಂಧ ಸುಧಾರಣೆ ಹಾಗೂ ಗಡಿಯಲ್ಲಿ ಶಾಂತಿ ಸ್ಥಾಪಿಸುವ ಉದ್ದೇಶಕ್ಕೆ ವಿರುದ್ಧವಾಗಿದೆ’ ಎಂದು ಚೀನಾದ ವಿದೇಶಾಂಗ ಇಲಾಖೆ ವಕ್ತಾರ ಲು ಕಾಂಗ್‌ ಅಭಿಪ್ರಾಯಪಟ್ಟಿದ್ದಾರೆ.

‘ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು ಬ್ರಿಕ್ಸ್‌ ಸಮ್ಮೇಳನದ ಸಂದರ್ಭದಲ್ಲಿ ಎರಡೂ ದೇಶಗಳ ಸಂಬಂಧ ಸುಧಾರಣೆ ಕುರಿತು ಮಾತುಕತೆ ನಡೆಸಿದ್ದರು. ಇತ್ತೀಚಿನ ಪ್ರಯತ್ನಗಳ ಭಾಗವಾಗಿ ಎರಡೂ ದೇಶಗಳ ಸಂಬಂಧದಲ್ಲಿ ಸುಧಾರಣೆ ಕಂಡುಬರುತ್ತಿದೆ. ಈ ಸಂದರ್ಭದಲ್ಲಿ ರಾವತ್‌ ಹೇಳಿಕೆಯಿಂದ ಸಂಬಂಧಕ್ಕೆ ಧಕ್ಕೆಯಾಗಲಿದೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಅಸಂಬದ್ಧ ಹೇಳಿಕೆಗಳ ಮೂಲಕ ಸಮಸ್ಯೆ ಸಂಕೀರ್ಣಗೊಳಿಸುವ ಬದಲು, ಶಾಂತಿ ಮತ್ತು ಸ್ಥಿರತೆ ಕಾಪಾಡುವ ನಿಟ್ಟಿನಲ್ಲಿ ಭಾರತದ ನಾಯಕರು ಗಮನಹರಿಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ದೋಕಲಾ ಕುರಿತ ರಾವತ್‌ ಹೇಳಿಕೆಗೆ ಚೀನಾ ವಿನಾಯಿತಿ ನೀಡಲಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ’ದೋಕಲಾ ಚೀನಾಕ್ಕೆ ಸೇರಿದ್ದು, ಚೀನಾದೊಂದಿಗೇ ಇರಲಿದೆ’ ಎಂದು ಲು ಕಾಂಗ್‌ ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.