ADVERTISEMENT

ಕಾಬೂಲ್ ದಾಳಿ: ಕರಾಳ ರಾತ್ರಿ ನೆನಪಿಸಿಕೊಂಡ ಭಾರತೀಯ

​ಪ್ರಜಾವಾಣಿ ವಾರ್ತೆ
Published 22 ಜನವರಿ 2018, 19:30 IST
Last Updated 22 ಜನವರಿ 2018, 19:30 IST
ಆಕಾಶ್ ರಾಜ್
ಆಕಾಶ್ ರಾಜ್   

ನವದೆಹಲಿ: ಕಾಬೂಲ್‌ನ ಹೋಟೆಲ್‌ ಮೇಲೆ ಉಗ್ರರು ನಡೆಸಿದ ದಾಳಿಯಿಂದ ಪಾರಾದವರಲ್ಲಿ ಇದ್ದ ಏಕೈಕ ಭಾರತೀಯ, ಆ ಕರಾಳ ರಾತ್ರಿಯನ್ನು ನೆನಪಿಸಿಕೊಂಡಿದ್ದಾರೆ.

ಕೊಚ್ಚಿಯ ಆಕಾಶ್ ರಾಜ್ ಅಫ್ಗನ್ ಮೂಲದ ಕಾಮ್ ವಿಮಾನಯಾನ ಸಂಸ್ಥೆಯ ದುಬೈ ಕಚೇರಿಯಲ್ಲಿ ಎರಡೂ
ವರೆ ವರ್ಷದಿಂದ ಮುಖ್ಯ ವಾಣಿಜ್ಯ ಅಧಿಕಾರಿ ಆಗಿದ್ದರು. ದುಬೈ ಕಚೇರಿ ಮುಚ್ಚಿದ್ದರಿಂದ, ಶನಿವಾರ ಕೆಲಸದ ಮೇಲೆ ಕಾಬೂಲ್‌ಗೆ ತೆರಳಿದ್ದರು.

‘ಆ ಕ್ಷಣಗಳನ್ನು ನೆನಪಿಸಿಕೊಳ್ಳುವುದು ಭಯಾನಕ. ಸಾವು ನನ್ನ ಸಮೀಪವೇ ಇತ್ತು. ನನ್ನ 10 ಮಂದಿ ಸಹೋದ್ಯೋಗಿಗಳು ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿಯಿತು. ಅದು ಆತಂಕದ ಸಮಯವಾಗಿತ್ತು’ ಎಂದು ಅಫ್ಗನ್ ವಿಶೇಷಪಡೆಗಳಿಂದ ರಕ್ಷಿಸಲ್ಪಟ್ಟ ರಾಜ್ ತಿಳಿಸಿದ್ದಾರೆ.

ADVERTISEMENT

‘ನನ್ನ ಸಹೋದ್ಯೋಗಿಯೊಬ್ಬ ಹೋಟೆಲ್ ಕೋಣೆಯಿಂದ ಹೊರಹೋದ. ಅದೇ ಸಮಯದಲ್ಲಿ ಸ್ಫೋಟದ ಸದ್ದು ಕೇಳಿದಂತಾಯಿತು. ಕೋಣೆಗಳು ಸೌಂಡ್ ಪ್ರೂಫ್ ಆಗಿರುವುದರಿಂದ ಹೊರಗೆ ಏನು ನಡೆಯುತ್ತಿದೆ ಎಂದು ತಿಳಿಯಲಿಲ್ಲ. ನಂತರ ಎಚ್ಚರಿಕೆಯಿಂದ ಇರಬೇಕು ಎಂದು ನನಗೆ ಸಂದೇಶಗಳು ಬರಲಾರಂಭಿಸಿದವು. ಮೊದಲಿಗೆ ನಾನು ಇದನ್ನು ಗಂಭೀರವಾಗಿ ಸ್ವೀಕರಿಸಲಿಲ್ಲ. ಆದರೆ ಸದ್ದು ಹೆಚ್ಚುತ್ತಲೇ ಹೋಯಿತು. ಉಗ್ರರು ದಾಳಿ ನಡೆಸಿ ಹೋಟೆಲ್ ಒಳಗೆ ಗ್ರೆನೇಡ್‌ಗಳನ್ನು ಎಸೆದಿದ್ದಾರೆ ಎಂದು ತಿಳಿಯಿತು. ತಕ್ಷಣವೇ ನಾನು ಕೋಣೆಯ ಬಾಗಿಲು ಭದ್ರಗೊಳಿಸಿದೆ’ ಎಂದು ರಾಜ್ ನೆನಪಿಸಿಕೊಂಡಿದ್ದಾರೆ.

ಸುಮಾರು 12 ತಾಸು ಅವರು ಹೋಟೆಲ್‌ನ 420ನೇ ನಂಬರ್ ಕೋಣೆಯಲ್ಲಿ ಕಾಲಕಳೆದಿದ್ದಾರೆ.

ಕುಟುಂಬದವರ ಸಂಪರ್ಕದಿಂದ ಧೈರ್ಯ: ‘ಹೋಟೆಲ್‌ನಲ್ಲಿ ವಿದ್ಯುತ್ ಸಂಪರ್ಕ ಇರಲಿಲ್ಲ. ನನ್ನ ಬಳಿ ಪವರ್ ಬ್ಯಾಂಕ್ ಇತ್ತು. ಅದರಿಂದಾಗಿ ಮೊಬೈಲ್‌ ಚಾರ್ಜ್ ಮಾಡಿಕೊಂಡು, ಕುಟುಂಬದವರ ಜತೆ ಸಂಪರ್ಕದಲ್ಲಿ ಇರಲು ಸಾಧ್ಯವಾಯಿತು. ಸಂದರ್ಭ ಎದುರಿಸಲು ಅವರು ನನಗೆ ಧೈರ್ಯ ನೀಡಿದರು. ಇಲ್ಲದಿದ್ದರೆ ಆತಂಕ, ಭೀತಿಯಲ್ಲಿ ನಾನು ಸತ್ತು ಹೋಗುವಂತಾಗಿದ್ದೆ’ ಎಂದು ತಾವು ಎದುರಿಸಿದ ಪರಿಸ್ಥಿತಿ ವಿವರಿಸಿದ್ದಾರೆ.

ಉಗ್ರರು ಮೊದಲ ಅಂತಸ್ತು ತಲುಪಿ ದಾಳಿ ನಡೆಸುತ್ತಿದಂತೆ ವಿಶೇಷ ಪಡೆಗಳು ಪ್ರತಿದಾಳಿ ನಡೆಸಿ ಉಗ್ರರನ್ನು ತಡೆಯಲು ಮುಂದಾದವು. ಹಾಗಿದ್ದರೂ ಮೂರನೇ ಅಂತಸ್ತಿನವರೆಗೂ ಉಗ್ರರು ಮುಂದುವರೆದಿದ್ದರು. ನಂತರ ಉಗ್ರರನ್ನು ಸಂಪೂರ್ಣ ಹತೋಟಿಗೆ ತೆಗೆದುಕೊಳ್ಳಲು ವಿಶೇಷ ಪಡೆ ಸಿಬ್ಬಂದಿ ಯಶಸ್ವಿಯಾದರು.

‘ನನ್ನ ಕೋಣೆಯ ಬಾಗಿಲನ್ನು ಯಾರೋ ಮುರಿಯುತ್ತಿರುವಂತೆ ಸದ್ದಾಯಿತು. ಅದು ಉಗ್ರರೇ ಇರಬೇಕು ಎಂದು ಭಾವಿಸಿ ಪರಿಸ್ಥಿತಿ ಎದುರಿಸಲು ಸಿದ್ಧನಾಗಿದ್ದೆ. ಆದರೆ ಒಳಬಂದಿದ್ದು ಅಫ್ಗನ್ ವಿಶೇಷಕಾರ್ಯಪಡೆ ಸಿಬ್ಬಂದಿ. ನನ್ನನ್ನು ರಕ್ಷಿಸಿದ ಸಿಬ್ಬಂದಿ ನ್ಯಾಟೊ ಪಡೆಗಳಿಗೆ ನನ್ನನ್ನು ಹಸ್ತಾಂತರಿಸಿದರು. ಅವರು ನನ್ನನ್ನು ವಿಶ್ವಸಂಸ್ಥೆ ಶಿಬಿರಕ್ಕೆ ಕರೆದೊಯ್ದರು. ಆರು ತಾಸು ಅಲ್ಲಿ ಕಾದ ಬಳಿಕ ಕಂಪನಿ ಕಾರಿನಲ್ಲಿ ವಿಮಾನ ನಿಲ್ದಾಣ ತಲುಪಿ ದುಬೈಗೆ ಪ್ರಯಾಣಿಸಿದೆ’ ಎಂದು ತಮ್ಮ ಕುಟುಂಬದವರ ಬಳಿಗೆ ಮರಳಿದ ಸಂದರ್ಭ ಹಂಚಿಕೊಂಡಿದ್ದಾರೆ.

ಈ ಉದ್ಯೋಗ ತೊರೆಯುವಂತೆ ಕುಟುಂಬದವರು ಹೇಳುತ್ತಿದ್ದಾರೆ. ಆದರೆ ಇನ್ನು ಸಹ ಏನನ್ನೂ ನಿರ್ಧರಿಸಿಲ್ಲ ಎಂದು ರಾಜ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.