ADVERTISEMENT

ಇಂಗ್ಲೆಂಡ್: ಪ್ರವಾಸಿಗರ ಆರೋಗ್ಯ ಸೇವೆಗಳ ಉಪಕರ ದುಪ್ಪಟ್ಟು

ಪಿಟಿಐ
Published 5 ಫೆಬ್ರುವರಿ 2018, 20:06 IST
Last Updated 5 ಫೆಬ್ರುವರಿ 2018, 20:06 IST
ಇಂಗ್ಲೆಂಡ್: ಪ್ರವಾಸಿಗರ ಆರೋಗ್ಯ ಸೇವೆಗಳ ಉಪಕರ ದುಪ್ಪಟ್ಟು
ಇಂಗ್ಲೆಂಡ್: ಪ್ರವಾಸಿಗರ ಆರೋಗ್ಯ ಸೇವೆಗಳ ಉಪಕರ ದುಪ್ಪಟ್ಟು   

ಲಂಡನ್: ಭಾರತ ಸೇರಿದಂತೆ ವಿವಿಧ ದೇಶಗಳ ಪ್ರವಾಸಿಗರು ಮತ್ತು ವಿದ್ಯಾರ್ಥಿಗಳ ಮೇಲೆ ವಿಧಿಸುವ ಆರೋಗ್ಯ ಸೇವೆಗಳ ಮೇಲಿನ ಉಪಕರವನ್ನು (ಸರ್‌ಚಾರ್ಜ್‌) ಸರ್ಕಾರ ದುಪ್ಪಟ್ಟುಗೊಳಿಸಿದೆ.

ಐರೋಪ್ಯ ಒಕ್ಕೂಟದ ದೇಶಗಳನ್ನು ಹೊರತುಪಡಿಸಿ ಇತರ ಎಲ್ಲ ದೇಶಗಳ ಪ್ರವಾಸಿಗರಿಗೆ ಇದು ಅನ್ವಯಿಸಲಿದೆ. ಇಂಗ್ಲೆಂಡ್‌ ಸರ್ಕಾರ 2015ರಲ್ಲಿ ಮೊದಲ ಬಾರಿಗೆ ಸರ್‌ಚಾರ್ಜ್‌ ಜಾರಿಗೊಳಿಸಿತ್ತು. ಆಗ ಇದರ ಮೊತ್ತ 200 ಪೌಂಡ್‌ (₹ 17,951) ಇತ್ತು. ಈಗ ಆ ಮೊತ್ತವನ್ನು 400 ಪೌಂಡ್‌ಗೆ (₹35,878) ಏರಿಕೆ ಮಾಡಿದೆ. ವಿದ್ಯಾರ್ಥಿಗಳಿಗೆ ರಿಯಾಯಿತಿ ದರವು ಮೊದಲು 150 ಪೌಂಡ್‌ (₹13,464) ಇದ್ದದ್ದು, ಈಗ 300 (₹31,393) ಪೌಂಡ್‌ಗೆ ಏರಿಕೆ ಆಗಿದೆ.

ಉದ್ಯೋಗ, ವ್ಯಾಸಂಗ ಅಥವಾ ಕುಟುಂಬ ಸದಸ್ಯರ ಭೇಟಿ ಸೇರಿದಂತೆ ವಿವಿಧ ಕಾರಣಗಳಿಗಾಗಿ ಇಂಗ್ಲೆಂಡ್‌ನಲ್ಲಿ ಆರು ತಿಂಗಳಿಗೂ ಹೆಚ್ಚು ಅವಧಿಗೆ ಇರುವವರು ಈ ಸರ್‌ಚಾರ್ಜ್‌ ಪಾವತಿಸಬೇಕಿದೆ. ರಾಷ್ಟ್ರೀಯ ಆರೋಗ್ಯ ಸೇವೆಗೆ (ಎನ್‌ಎಚ್‌ಎಸ್‌) ಹೆಚ್ಚುವರಿ ಮೊತ್ತ ಸಂಗ್ರಹಿಸಲು ಈ ಏರಿಕೆ ಮಾಡಲಾಗಿದೆ.

ADVERTISEMENT

‘ಇಂಗ್ಲೆಂಡ್‌ಗೆ ಭೇಟಿ ನೀಡುವವರು ಎನ್‌ಎಚ್‌ಎಸ್‌ಗೆ ಸರ್‌ಚಾರ್ಜ್‌ ಪಾವತಿ ಮಾಡಲೇಬೇಕು. ಇದರಿಂದ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸಬಹುದು. ಇತರ ದೇಶಗಳಿಗೆ ಹೋಲಿಕೆ ಮಾಡಿದರೆ ಈ ಮೊತ್ತ ಅತ್ಯಂತ ಕಡಿಮೆ’ ಎಂದು ಇಂಗ್ಲೆಂಡ್‌ನ ವಲಸೆ ಇಲಾಖೆ ಸಚಿವೆ ಕೆರೊಲಿನ್ ನೊಕ್ಸ್ ತಿಳಿಸಿದ್ದಾರೆ.

ಸರ್‌ಚಾರ್ಜ್‌ ಪಾವತಿಸುವ ಪ್ರತಿಯೊಬ್ಬರಿಗೆ ಆರೋಗ್ಯ ಸೇವೆಗಳನ್ನು ಒದಗಿಸಲು ಎನ್‌ಎಚ್‌ಎಸ್‌ 470 ಪೌಂಡ್‌ ಖರ್ಚು ಮಾಡುತ್ತದೆ ಎಂದು ಇಲಾಖೆ ಅಂದಾಜಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.