ADVERTISEMENT

‘ವೈರಸ್ ಅಪಾಯ ತಡೆಯಲು 6 ಅಡಿ ಅಂತರ ಸಾಕಾಗುವುದಿಲ್ಲ’

ತಂಪು ವಾತಾವರಣದಲ್ಲಿ 20 ಅಡಿಯವರೆಗೂ ವೈರಸ್‌ ಸಂಚರಿಸಬಹುದು

ಪಿಟಿಐ
Published 27 ಮೇ 2020, 19:53 IST
Last Updated 27 ಮೇ 2020, 19:53 IST
   

ಲಾಸ್‌ಏಂಜಲಿಸ್‌: ತಂಪು ವಾತಾವರಣದಲ್ಲಿ ಕೊರೊನಾ ವೈರಸ್‌ ನಿಯಂತ್ರಿಸಲು ಕೇವಲ 6 ಅಡಿ ಅಂತರ ಕಾಪಾಡಿದರೆ ಸಾಕಾಗುವುದಿಲ್ಲ. 20 ಅಡಿವರೆಗೂ ವೈರಸ್‌ ಸಂಚರಿಸುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರು ಈ ಬಗ್ಗೆ ಅಧ್ಯಯನ ನಡೆಸಿದ್ದು, ತಂಪು ವಾತಾವಾರಣದಲ್ಲಿ ವೈರಸ್‌ ಮೂರು ಪಟ್ಟು ವೇಗವಾಗಿ ಹಬ್ಬುತ್ತದೆ ಎಂದು ತಿಳಿಸಿದ್ದಾರೆ.

ಸೀನುವುದು, ಕೆಮ್ಮುವುದು ಮತ್ತು ಸಹಜ ಮಾತುಕತೆ ಸಂದರ್ಭದಲ್ಲಿ 40 ಸಾವಿರ ಹನಿಗಳು ಹೊರಚೆಲ್ಲಬಹುದು. ಪ್ರತಿ ಸೆಕೆಂಡ್‌ಗೆ ಕೆಲವೇ ಮೀಟರ್‌ಗಳಿಂದ ನೂರು ಮೀಟರ್‌ವರೆಗೂ ಈ ಹನಿಗಳು ಹಬ್ಬಬಹುದು ಎನ್ನುವುದು ಈ ಹಿಂದೆ ನಡೆಸಿದ ಅಧ್ಯಯನದ ಸಂದರ್ಭದಲ್ಲಿ ತಿಳಿದು ಬಂದಿದೆ. ವಿವಿಧ ವಾತಾವರಣ, ಸನ್ನಿವೇಶಗಳಲ್ಲಿ ವೈರಸ್‌ ಹಬ್ಬುವುದು ಸಹ ವಿಭಿನ್ನವಾಗಿರುತ್ತದೆ. ಕಡಿಮೆ ತಾಪಮಾನ ಮತ್ತು ಹೆಚ್ಚು ತೇವಾಂಶ ಹೊಂದಿರುವ ವಾತಾವರಣವಿದ್ದರೆ ವೈರಸ್‌ ಹಬ್ಬುವ ಸಾಧ್ಯತೆ ಹೆಚ್ಚು ಎಂದು ಅವರು ವಿಶ್ಲೇಷಿಸಿದ್ದಾರೆ.

ADVERTISEMENT

ಎಲ್ಲ ಅಂಶಗಳನ್ನು ವಿಶ್ಲೇಷಿಸಿದಾಗ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ (ಸಿಡಿಸಿ) ಸೂಚಿಸಿದಂತೆ ಕೆಲವು ವಾತಾವರಣದಲ್ಲಿ 6 ಅಡಿ ಅಂತರ ಸಾಕಾಗುವುದಿಲ್ಲ. ತಂಪು ಮತ್ತು ತೇವಾಂಶ ಹೊಂದಿರುವ ವಾತಾವರಣದಲ್ಲಿ 20 ಅಡಿಯವರೆಗೂ ಹಬ್ಬುತ್ತದೆ.ಬಿಸಿಲಿನ ವಾತಾವರಣದಲ್ಲಿ ಉಸಿರಾಟದ ಹನಿಗಳು ತ್ವರಿತಗತಿಯಲ್ಲಿ ಆವಿಯಾಗುತ್ತವೆ ಎಂದು ತಿಳಿಸಿದ್ದಾರೆ.

ಆದರೆ, ಮುಖಕ್ಕೆ ಮಾಸ್ಕ್‌ ಧರಿಸುವ ಮೂಲಕ ವೈರಸ್‌ ಹಬ್ಬುವುದನ್ನು ತಡೆಯಲು ಸಾಧ್ಯ ಎಂದು ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ. ವಿಭಿನ್ನ ಹವಾಮಾನ ಪರಿಸ್ಥಿತಿಗಳಲ್ಲಿ ವೈರಸ್‌ ಎಷ್ಟು ದಿನ ಬದುಕಿರುತ್ತದೆ ಎನ್ನುವ ಬಗ್ಗೆ ಇನ್ನೂ ನಿಖರವಾಗಿ ತಿಳಿದು ಬಂದಿಲ್ಲ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.