ADVERTISEMENT

ಗೋದಾಮಿನಲ್ಲಿ ಬೆಂಕಿ: 70 ಮಂದಿ ಸಾವು

ಪಿಟಿಐ
Published 21 ಫೆಬ್ರುವರಿ 2019, 20:00 IST
Last Updated 21 ಫೆಬ್ರುವರಿ 2019, 20:00 IST
ಬಾಂಗ್ಲಾ ರಾಜಧಾನಿ ಢಾಕಾದ ವಸತಿ ಸಮುಚ್ಛಯದಲ್ಲಿ ಅಗ್ನಿ ಅವಘಡ ಸಂಭವಿಸಿದೆ
ಬಾಂಗ್ಲಾ ರಾಜಧಾನಿ ಢಾಕಾದ ವಸತಿ ಸಮುಚ್ಛಯದಲ್ಲಿ ಅಗ್ನಿ ಅವಘಡ ಸಂಭವಿಸಿದೆ   

ಢಾಕಾ:ಬಾಂಗ್ಲಾದೇಶದ ರಾಜಧಾನಿ ಢಾಕಾದ ಗೋದಾಮಿನಲ್ಲಿ ಬುಧವಾರ ರಾತ್ರಿ ಸಂಭವಿಸಿದಭೀಕರ ಅಗ್ನಿ ದುರಂತದಲ್ಲಿ ಕನಿಷ್ಠ 70 ಮಂದಿ ಮೃತಪಟ್ಟಿದ್ದಾರೆ.

ಘಟನೆಯಲ್ಲಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು,ಅವರನ್ನುಢಾಕಾದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ಚೌಕ್‌ ಬಜಾರ್ ಪ್ರದೇಶದ ಐದು ಅಂತಸ್ತಿನ ಹಾಜಿ ವಾಹೀದ್‌ ಗೋದಾಮಿನಲ್ಲಿ ಈ ಅವಘಡ ಸಂಭವಿಸಿದೆ. ರಾಸಾಯನಿಕ ಸಂಗ್ರಹಿಸಿದ್ದ ಕಟ್ಟಡಕ್ಕೆ ತಗುಲಿದ ಬೆಂಕಿ ಸ್ವಲ್ಪ ಸಮಯದಲ್ಲಿಯೇ ಸಮೀಪದ ನಾಲ್ಕು ಕಟ್ಟಡಗಳಿಗೂ ವ್ಯಾಪಿಸಿದೆ. ಮದುವೆ ಸಮಾರಂಭ ನಡೆಯುತ್ತಿದ್ದ ಸಮುದಾಯ ಭವನಕ್ಕೂ ಬೆಂಕಿ ತಗುಲಿದೆ. ಹಲವು ಕಾರುಗಳು ಹಾನಿಗೊಳಗಾಗಿವೆ.

ADVERTISEMENT

‘ಗ್ಯಾಸ್‌ ಸಿಲಿಂಡರ್‌ನಲ್ಲಿ ಮೊದಲು ಬೆಂಕಿ ಕಾಣಿಸಿದೆ.ಈ ಕಟ್ಟಡದ ಹಲವೆಡೆ ರಾಸಾಯನಿಕ ಸಂಗ್ರಹಿಸಿರುವುದರಿಂದ ಬೆಂಕಿ ಇಷ್ಟು ವ್ಯಾಪಕವಾಗಿ ಆವರಿಸಿದೆ’ ಎಂದು ಅಗ್ನಿಶಾಮಕ ಇಲಾಖೆ ನಿರ್ದೇಶಕ ಶಕೀಲ್‌ ನೆವಾಜ್‌ ತಿಳಿಸಿದ್ದಾರೆ.

ಅಗ್ನಿ ಅವಘಡದ ನಂತರ ಈ ಪ್ರದೇಶದಲ್ಲಿ ಸಂಚಾರ ದಟ್ಟಣೆ ಉಂಟಾಗಿ, ದಾರಿಹೋಕರಿಗೂ ಬೆಂಕಿ ತಗುಲಿದೆ.

ಮೃತಪಟ್ಟವರ ಶವ ಬಹುತೇಕ ಸುಟ್ಟು ಹೋಗಿರುವುದರಿಂದ ಗುರುತು ಪತ್ತೆಯೂ ಸಮಸ್ಯೆಯಾಗಿದೆ.

ಇದು ಇಕ್ಕಟ್ಟಿನ ಪ್ರದೇಶವಾದ್ದರಿಂದಅಗ್ನಿಶಾಮಕ ದಳದ ಸಿಬ್ಬಂದಿಗೆ ಬೆಂಕಿ ನಂದಿಸುವುದು ಸವಾಲಾಯಿತು.

2010ರಲ್ಲೂ ಢಾಕಾದ ಹಳೆದ ಕಟ್ಟಡವೊಂದರಲ್ಲಿ ಇದೇ ರೀತಿ ಅಗ್ನಿ ಅವಘಡ ಸಂಭವಿಸಿ, 120 ಮಂದಿ ಮೃತರಾಗಿದ್ದರು. ಈ ವೇಳೆ ರಾಸಾಯನಿಕ ಗೋದಾಮುಗಳನ್ನು ಬೇರೆ ಕಡೆ ಸ್ಥಳಾಂತರಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದರು. ಆದರೆ, ಒಂಬತ್ತು ವರ್ಷಗಳ ನಂತರವೂ ಈ ನಿಟ್ಟಿನಲ್ಲಿ ಹೆಚ್ಚಿನ ಪ್ರಗತಿಯಾಗಿಲ್ಲ. ಕೆಲವೇ ಗೋದಾಮುಗಳನ್ನು ಮಾತ್ರ ಸ್ಥಳಾಂತರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.