ADVERTISEMENT

95ನೇ ವರ್ಷಕ್ಕೆ ಕಾಲಿಟ್ಟ ಮಂಡೇಲಾ; ಶುಭಾಶಯ ಮಹಾಪೂರ

​ಪ್ರಜಾವಾಣಿ ವಾರ್ತೆ
Published 18 ಜುಲೈ 2013, 19:59 IST
Last Updated 18 ಜುಲೈ 2013, 19:59 IST

ಜೋಹಾನ್ಸ್‌ಬರ್ಗ್ (ಪಿಟಿಐ): ಸಾವು-ಬದುಕಿನ ಹೋರಾಟದ ನಂತರ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಅವರ 95ನೇ ಜನ್ಮದಿನವನ್ನು ಗುರುವಾರ ಇಡೀ ದೇಶವೇ ಒಂದಾಗಿ ಸಡಗರ, ಸಂಭ್ರಮದಿಂದ ಆಚರಿಸಿತು.

ಶ್ವಾಸಕೋಶ ಸೋಂಕಿನಿಂದಾಗಿ 41 ದಿನಗಳಿಂದ ಪ್ರಿಟೋರಿಯಾದ ಆಸ್ಪತ್ರೆಯಲ್ಲಿರುವ ಮಂಡೇಲಾ ಅವರಿಗೆ ಶುಭಾಶಯ ಕೋರಲು ನೂರಾರು ಅಭಿಮಾನಿಗಳು, ಶಾಲಾ ಮಕ್ಕಳು ಬೆಳಿಗ್ಗೆ ಆಸ್ಪತ್ರೆ ಎದುರು ಜಮಾಯಿಸಿದ್ದರು. ಪುಷ್ಪಗುಚ್ಛ, ಶುಭಾಶಯ ಕೋರುವ ಫಲಕಗಳನ್ನು ಹಿಡಿದಿದ್ದ ಮಕ್ಕಳು ತಮ್ಮ ಪ್ರೀತಿಯ `ಮಡಿಬಾ'ಗೆ ದೀರ್ಘಾಯುಷ್ಯ ಕೋರಿದರು. ಬೇಗ ಗುಣಮುಖವಾಗುವಂತೆ ಪ್ರಾರ್ಥನೆ ಸಲ್ಲಿಸಿದರು.

ಅಧ್ಯಕ್ಷ  ಜಾಕೋಬ್ ಝುಮಾ ಹಾಗೂ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಮಂಡೇಲಾ ಅವರಿಗೆ ಜನ್ಮದಿನದ ಶುಭಾಶಯ ಕೋರಿ ಸಂದೇಶ ಕಳಿಸಿದ್ದಾರೆ. ತಮ್ಮ ಕುಟುಂಬ ಮತ್ತು ಸಮಸ್ತ ಅಮೆರಿಕದ ನಾಗರಿಕರ ಪರ ಶುಭಾಶಯ ಸಲ್ಲಿಸುತ್ತಿರುವುದಾಗಿ ಒಬಾಮ ಸಂದೇಶದಲ್ಲಿ ತಿಳಿಸಿದ್ದಾರೆ. ಕಪ್ಪು ವರ್ಣೀಯರ ಹಕ್ಕುಗಳಿಗಾಗಿ ಮಂಡೇಲಾ ನಡೆಸಿದ ಹೋರಾಟವನ್ನು ಅವರು ಮನದುಂಬಿ ಶ್ಲಾಘಿಸಿದ್ದಾರೆ.

ಪ್ರಜಾಪ್ರಭುತ್ವದ ಪ್ರತೀಕವಾಗಿರುವ ಮಂಡೇಲಾ ಅವರ ಜನ್ಮದಿನವನ್ನು ಅಂತರರಾಷ್ಟ್ರೀಯ ಮಂಡೇಲಾ ದಿನ ಎಂದು ವಿಶ್ವಸಂಸ್ಥೆ ಘೋಷಿಸಿದೆ. ವರ್ಣಭೇದ ನೀತಿಯ ವಿರುದ್ಧ 67 ವರ್ಷ  ಹೋರಾಡಿದ ಮಂಡೇಲಾ ಅವರ ಹೋರಾಟದ ಸವಿ ನೆನಪಿಗಾಗಿ ವಿವಿಧ ಸಂಘ, ಸಂಸ್ಥೆಗಳು ರಾಷ್ಟ್ರವ್ಯಾಪಿ `67 ನಿಮಿಷಗಳ ಮಂಡೇಲಾ ಆಂದೋಲನ' ಹಮ್ಮಿಕೊಂಡಿದ್ದವು. ಆಂದೋಲನದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಯುವಕರು ಸಮುದಾಯ ಸೇವೆಯಲ್ಲಿ ತೊಡಗಿದ್ದರು.

ಮಂಡೇಲಾ ಮತ್ತು ಅವರ ಮೂರನೇ ಪತ್ನಿ ಗ್ರೆಕಾ ಮಶೆಲ್ ಸಹ ಜುಲೈ 18ರಂದೇ ವಿವಾಹವಾಗಿದ್ದು, ಇದು ಅವರ 15ನೇ  ವಿವಾಹ ವಾರ್ಷಿಕೋತ್ಸವ. ಮಂಡೇಲಾ ಗೌರವಾರ್ಥ ದೇಶದ ಅಲ್ಲಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಭಾರತೀಯ ಮೂಲದ ಪ್ರಸಿದ್ಧ ಗಾಯಕ ರಮೇಶ್ ಹಾಸನ್ ಹಾಗೂ ಗೇನ್ ಪಾರ್ಕರ್ ಅವರು ಕ್ರಮವಾಗಿ ಡರ್ಬಾನ್ ಮತ್ತು ಕೇಪ್ ಟೌನ್‌ನಲ್ಲಿ ಮಂಡೇಲಾ ಬಗ್ಗೆ ಗೀತೆ ರಚಿಸಿ ಹಾಡಿದರು.  ಸ್ಥಳೀಯ ಝುಲು, ಉರ್ದು ಮತ್ತು ಇಂಗ್ಲಿಷ್ ಭಾಷೆಗಳ ಈ ಹಾಡುಗಳು ಜನರನ್ನು ರಂಜಿಸಿದವು.

ನಸುನಕ್ಕ `ಮಡಿಬಾ'
ತಮ್ಮ ತಂದೆ ಚೇತರಿಸಿಕೊಂಡಿದ್ದು ಯಾವುದೇ ಸಮಯದಲ್ಲಾದರೂ ಮನೆಗೆ ತೆರಳಬಹುದು ಎಂದು ಮಂಡೇಲಾ ಅವರ ಮಗಳು ಝಿಂಡ್ಝಿ ಸುದ್ದಿವಾಹಿನಿಯೊಂದಕ್ಕೆ ತಿಳಿಸಿದ್ದಾರೆ.

`ನಿನ್ನೆ ಆಸ್ಪತ್ರೆಗೆ ತೆರಳಿದ್ದೆ. ಆಗ ಅವರು ಹೆಡ್‌ಫೋನ್ ಅಳವಡಿಸಿಕೊಂಡು ಟಿ.ವಿ ವೀಕ್ಷಿಸುತ್ತಿದ್ದರು. ನನ್ನನ್ನು ನೋಡಿದ ತಕ್ಷಣ ದೊಡ್ಡ ನಗೆ ಬೀರಿ, ಕೈಗಳನ್ನು ಮುಂದಕ್ಕೆ ಬಾಚಿದರು. ಕಣ್ಣು ಸಂಜ್ಞೆ ಮತ್ತು ತಲೆ ಅಲ್ಲಾಡಿಸುವ ಮೂಲಕ ಪ್ರತಿಕ್ರಿಯಿಸಿದರು' ಎಂದು ಝಿಂಡ್ಝಿ ಹೇಳಿದ್ದಾರೆ.

ಆಫ್ರಿಕಾದಲ್ಲಿ 2010ರಲ್ಲಿ ನಡೆದ ಫಿಫಾ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಯ ನಂತರ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಮಂಡೇಲಾ ಅನಾರೋಗ್ಯದಿಂದ ಆಸ್ಪತ್ರೆ ಸೇರುತ್ತಿರುವುದು ಇದು ಎರಡನೇ ಬಾರಿ. ರಾಬೆನ್ ದ್ವೀಪದಲ್ಲಿ ರಾಜಕೀಯ ಕೈದಿಯಾಗಿದ್ದಾಗಲೇ ಅವರಿಗೆ ಕ್ಷಯರೋಗ ತಗುಲಿತ್ತು. ಆ ನಂತರ ಅವರು ಪದೇ ಪದೇ ಶ್ವಾಸಕೋಶ ಸೋಂಕಿಗೆ ಒಳಗಾಗುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.