ADVERTISEMENT

ಉಕ್ರೇನ್‌ನಲ್ಲಿ ಜೈವಿಕ ಅಸ್ತ್ರ ಪ್ರಯೋಗಾಲಯ: ರಷ್ಯಾ ಗಂಭೀರ ಆರೋಪ; ಅಮೆರಿಕ ನಿರಾಕರಣ

ಪಿಟಿಐ
Published 12 ಮಾರ್ಚ್ 2022, 19:54 IST
Last Updated 12 ಮಾರ್ಚ್ 2022, 19:54 IST
ಉಕ್ರೇನ್‌ನ ಕೀವ್‌ ನಗರದಲ್ಲಿ ಶನಿವಾರ ರಷ್ಯಾ ಪಡೆಗಳು ನಡೆಸಿದ ಶೆಲ್‌ ದಾಳಿಗೆ ಮನೆಗಳು ಹೊತ್ತಿ ಉರಿದವು. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟರು – ಎಎಫ್‌ಪಿ ಚಿತ್ರ
ಉಕ್ರೇನ್‌ನ ಕೀವ್‌ ನಗರದಲ್ಲಿ ಶನಿವಾರ ರಷ್ಯಾ ಪಡೆಗಳು ನಡೆಸಿದ ಶೆಲ್‌ ದಾಳಿಗೆ ಮನೆಗಳು ಹೊತ್ತಿ ಉರಿದವು. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟರು – ಎಎಫ್‌ಪಿ ಚಿತ್ರ   

ವಿಶ್ವಸಂಸ್ಥೆ: ಜೈವಿಕ ಮತ್ತು ಅಣ್ವಸ್ತ್ರಗಳಿಗೆ ಸಂಬಂಧಿಸಿದ ಯಾವುದೇ ವಿಷಯವು ಸಂಬಂಧಿತ ಭಾಗಿದಾರ ದೇಶಗಳ ಜತೆ ಸಮಾಲೋಚನೆ ಮತ್ತು ಸಹಕಾರದಲ್ಲಿಯೇ ಇತ್ಯರ್ಥವಾಗಬೇಕು ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಪ್ರತಿಪಾದಿಸಿದೆ.

ಯುದ್ಧಪೀಡಿತ ಉಕ್ರೇನ್‌ನಲ್ಲಿ ಇರುವ ಜೈವಿಕ ಪ್ರಯೋಗಾಲಯ ಕುರಿತ ವಿಷಯ ಚರ್ಚೆಗೆ ಬಂದಾಗ ಭಾರತ ತನ್ನ ನಿಲುವನ್ನು ಸ್ಪಷ್ಟಪಡಿಸಿತು. ಅಮೆರಿಕ ನೆರವಿನಲ್ಲಿ ಉಕ್ರೇನ್‌ ರಾಸಾಯನಿಕ, ಜೈವಿಕ ಅಸ್ತ್ರಗಳ ಪ್ರಯೋಗಾಲಯಗಳನ್ನು ನಿರ್ವಹಿಸುತ್ತಿದೆ ಎಂದು ರಷ್ಯಾ ಆರೋಪಿಸಿದೆ. ಅಮೆರಿಕ ಈ ಆರೋಪ ನಿರಾಕರಿಸಿದ ಬೆನ್ನಲ್ಲೇ, ರಷ್ಯಾ ಸಭೆಗೆ
ಆಗ್ರಹಪಡಿಸಿತ್ತು.

‘ಉಕ್ರೇನ್‌ನ ಬೆಳವಣಿಗೆ ಬಗ್ಗೆ ನಾವು ಆತಂಕ ವ್ಯಕ್ತಪಡಿಸಿದ್ದೇವೆ. ಜೈವಿಕ ಅಸ್ತ್ರಗಳ ಪ್ರಯೋಗಾಲಯದ ಚಟುವ
ಟಿಕೆ ಕುರಿತಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳು ಇತ್ತೀಚೆಗೆ ನೀಡಿರುವ ಹೇಳಿಕೆಗಳನ್ನು ಭಾರತ ಗಮನಿಸಿದೆ’ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿ ಟಿ.ಎಸ್‌.ತಿರುಮೂರ್ತಿ ಅವರು ಹೇಳಿದರು.

ADVERTISEMENT

ಜೈವಿಕ ಮತ್ತು ಅಣ್ವಸ್ತ್ರ ಸಮಾವೇಶದಲ್ಲಿ (ಬಿಟಿಡಬ್ಲ್ಯೂಸಿ) ಭಾರತ ತನ್ನ ನಿಲುವನ್ನು ಪುನರುಚ್ಚರಿಸಲಿದೆ. ಬಿಟಿಡಬ್ಲ್ಯೂಸಿ ನಿರ್ಣಯಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು.

ಉಕ್ರೇನ್‌ ಮೇಲಿನ ದಾಳಿ ಕುರಿತು ವಿವರಿಸಿದ ವಿಶ್ವಸಂಸ್ಥೆಯ ರಾಜಕೀಯ ಮತ್ತು ಶಾಂತಿ ಸ್ಥಾಪನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ರೋಸ್‌ಮೇರಿ ಡಿಕಾರ್ಲೊ ಅವರು, ‘ಉಕ್ರೇನ್‌ನ ಮರಿಯುಪೋಲ್‌, ಹಾರ್ಕಿವ್, ಸುಮಿ ಮತ್ತು ಚೆರ್ನಿವ್‌ನಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ವಸತಿ ಪ್ರದೇಶ, ಮೂಲಸೌಕರ್ಯಗಳ ಮೇಲೆ ದಾಳಿ ನಡೆದಿದೆ’ ಎಂದರು.

ರಷ್ಯಾ ತೊರೆಯುತ್ತಿರುವ ಕಂಪನಿಗಳು

ಕೀವ್‌ (ಎಪಿ): ಉಕ್ರೇನ್‌ ಹಾಗೂ ರಷ್ಯಾ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿದ್ದು, ರಷ್ಯಾದ ಆರ್ಥಿಕತೆಯ ಮೇಲೆ ಹೊಡೆತ ಬೀಳುತ್ತಿದೆ.

ರಷ್ಯಾ ನಡೆಸುತ್ತಿರುವ ಯುದ್ಧದಿಂದ ದೇಶದಲ್ಲಿರುವ ದೊಡ್ಡ ಕಂಪನಿಗಳು ತೀವ್ರ ನಲುಗಿದ್ದು, ಇಲ್ಲಿನ ತಮ್ಮ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿ ದೇಶ ತೊರೆಯುತ್ತಿವೆ. ಇನ್ನೊಂದೆಡೆ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಇಂತಹ ಕಂಪನಿಗಳಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ.

‘ಒಂದು ವೇಳೆ ವಿದೇಶಿ ಕಂಪನಿಗಳು ದೇಶ ತೊರೆದರೆ, ಆ ಕಂಪನಿಗಳಿಗೆ ಸಂಬಂಧಿಸಿದ ಆಸ್ತಿ ಮುಟ್ಟುಗೋಲು ಹಾಕಿಕೊಂಡು, ಹೊಸಬರಿಗೆ ಅವಕಾಶ ನೀಡಲಾಗುತ್ತದೆ’ ಎಂದು ಪುಟಿನ್‌ ಹೇಳಿದ್ದಾರೆ.

ಮಾಸ್ಕೊದಲ್ಲಿರುವ ‘ಎವ್ರೊಪಿಸ್ಕಿ’ ಮಾಲ್‌ ಜಾಗತಿಕ ಮಟ್ಟದಲ್ಲಿ ಹೆಸರು ಪಡೆದಿದೆ. ಉಕ್ರೇನ್‌ನೊಡನೆ ಸಂಘರ್ಷ ಆರಂಭವಾದಾಗಿನಿಂದ ಅನೇಕ ಕಂಪನಿಗಳು ಎವ್ರೊಪಿಸ್ಕಿ ಮಾಲ್‌ ತೊರೆಯುತ್ತಿವೆ. ಜನರಿಂದ ಸದಾ ಕಿಕ್ಕಿರಿದು ತುಂಬಿರುತ್ತಿದ್ದ ಮಾಲ್‌ ಈಗ ನಿರ್ಜನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.