ಸಾಂದರ್ಭಿಕ ಚಿತ್ರ
ಗುಜ್ರಾ: ಪಶ್ಚಿಮ ಅಫ್ಗಾನಿಸ್ತಾನದಲ್ಲಿ ನಿರಾಶ್ರಿತರಿದ್ದ ಬಸ್ ಹಾಗೂ ಎರಡು ವಾಹನಗಳ ಮಧ್ಯೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 76 ದಾಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇರಾನ್‌ನಿಂದ ಆಗಮಿಸಿದ್ದ ಅಫ್ಗಾನ್ ನಿರಾಶ್ರಿತರನ್ನು ಬಸ್ ಮೂಲಕ ರಾಜಧಾನಿ ಕಾಬೂಲ್‌ಗೆ ಕರೆದುಕೊಂಡು ಬರಲಾಗುತಿತ್ತು.
ಘಟನೆಯಲ್ಲಿ ಇನ್ನೂ ಮೂರು ಜನ ಗಂಭೀರ ಗಾಯಗೊಂಡಿದ್ದಾರೆ. ಮೃತ ದೇಹಗಳನ್ನು ಸೇನಾ ಆಸ್ಪತ್ರೆಗೆ ಸ್ಥಳಾಂತರಿಸಿದ್ದು, ಇದರಲ್ಲಿ ಹೆಚ್ಚಿನ ಸಂಖ್ಯೆಯ ಮಕ್ಕಳು ಕೂಡ ಇದ್ದಾರೆ ಎಂದು ಹೇಳಿದ್ದಾರೆ.
ಮಂಗಳವಾರ ರಾತ್ರಿ ಗುಜ್ರಾ ಪ್ರಾಂತ್ಯದಲ್ಲಿ ನಿರಾಶ್ರಿತರಿದ್ದ ಬಸ್, ಇಂಧನ ತುಂಬಿದ ಟ್ರಕ್ ಹಾಗೂ ಬೈಕ್ ನಡುವೆ ಅಪಘಾತವಾಗಿದೆ. ಇದರಿಂದ ಬೆಂಕಿ ಹೊತ್ತಿಕೊಂಡಿದ್ದು, ಮೃತಪಟ್ಟವರ ದೇಹಗಳು ಗುರುತಿಸಲಾಗದ ಸ್ಥಿತಿಯಲ್ಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ರಾತ್ರಿ ಜರುಗಿದ ಬಸ್ ದುರಂತವು ಅಫ್ಗಾನಿಸ್ತಾನದಲ್ಲಿ ಇತ್ತೀಚೆಗೆ ನಡೆದ ಅತಿ ದೊಡ್ಡ ಅಪಘಾತವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಕಳಪೆ ರಸ್ತೆ ಕಾಮಗಾರಿ ಹಾಗೂ ರಸ್ತೆ ಸುರಕ್ಷತಾ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡದೇ ಇರುವುದರಿಂದ ಅಫ್ಗಾನಿಸ್ತಾನದಲ್ಲಿ ನಿರಂತರವಾಗಿ ರಸ್ತೆ ಅಪಘಾತ ಪ್ರಕರಣಗಳು ವರದಿಯಾಗುತ್ತಿವೆ.
ಇರಾನ್ ಹಾಗೂ ಪಾಕಿಸ್ತಾನ ಮೂಲದಿಂದ ಈ ವರ್ಷದಲ್ಲಿ ಸುಮಾರು 1.5 ಮಿಲಿಯನ್ ಜನರು ಅಫ್ಗಾನಿಸ್ತಾನಕ್ಕೆ ಮರಳಿ ಬಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.